March 3, 2026
WhatsApp Image 2025-09-07 at 9.16.30 AM

ಬಂಟ್ವಾಳ: ಲಂಚ ಸ್ವೀಕರಿಸುತ್ತಿದ್ದಾಗ ಬಂಟ್ವಾಳ ತಾಲೂಕಿನ ಪೆರುವಾಯಿ ಗ್ರಾಮ ಪಂಚಾಯತ್ ಅಧ್ಯಕ್ಷೆ ಮತ್ತು ಬಿಲ್ ಕಲೆಕ್ಟರ್ ಮಂಗಳೂರು ಲೋಕಾಯುಕ್ತ ಬಲೆಗೆ ಬಿದ್ದ ಘಟನೆ ಶನಿವಾರ ಸಂಜೆ ನಡೆದಿದೆ.

ಪೆರುವಾಯಿ ಗ್ರಾಮ ಪಂಚಾಯತ್‌ಗೆ ಸರ್ಕಾರದ ವಿಶೇಷ ಘಟಕ ಯೋಜನೆ ಮತ್ತು ಗಿರಿಜನ ಉಪಯೋಜನೆಯಡಿಯಲ್ಲಿ ತಮ್ಮ ಜಾಗಕ್ಕೂ ಒಂದು ಕೊಳವೆ ಬಾವಿಯನ್ನು ಮಾಡಿಕೊಡಲು 2024ರಲ್ಲಿ ಪೆರುವಾಯಿ ಗ್ರಾಮ ಪಂಚಾಯತ್‌ ಅವರಿಗೆ ಫಲಾನುಭವಿಯೊಬ್ಬರು ಅರ್ಜಿ ಸಲ್ಲಿಸಿದ್ದರು.

ಪೆರುವಾಯಿ ಗ್ರಾಮ ಪಂಚಾಯತ್ ಕಚೇರಿಗೆ ಎರಡು ಮೂರು ಬಾರಿ ಹೋಗಿ ವಿಚಾರಿಸಿದರೂ ಸರಿಯಾಗಿ ಪ್ರತಿಕ್ರಿಯೆ ನೀಡಿಲ್ಲ ಎನ್ನಲಾಗಿದೆ. ಬಳಿಕ ‘ನಿಮಗೆ ಬೋರ್‌ವೆಲ್ ಫ್ರೀ ಆಗುತ್ತದೆ, ಬೆಂಗಳೂರು ಆಫೀಸ್‌ಗೆ ಹತ್ತು ಸಾವಿರ ಕೊಡ್ಲಿಕ್ಕೆ ಇದೆ, ಹಣ ಕೊಟ್ಟರೆ ಅವರು ಪಾಸ್ ಮಾಡುತ್ತಾರೆ. ತಾನು ಬೆಂಗಳೂರಿಗೆ ಹೋಗಿ ನಿಮ್ಮ ಕೆಲಸ ಮಾಡಿಸುತ್ತೇನೆ, ಹಣ ತಗೊಂಡು ಬನ್ನಿ, ನೀವು ಹಣ ಕೊಟ್ಟರೆ ಬೋರ್‌ವೆಲ್ ಪಾಸ್ ಮಾಡಿಸಿ ಕೊಡುತ್ತೇನೆ’ ಎಂದು ಅಧ್ಯಕ್ಷೆ ನೆಫಿಸಾ ಹೇಳಿದ್ದರು ಎನ್ನಲಾಗಿದೆ.

ನೆಫಿಸಾ ಅವರು ವಿಶೇಷ ಘಟಕ ಯೋಜನೆ ಮತ್ತು ಗಿರಿಜನ ಉಪಯೋಜನೆಯಡಿಯಲ್ಲಿ ಬೋರ್‌ವೆಲ್ ಹಾಕಿಸಿ ಕೊಡಲು ರೂ 10,000 ಲಂಚದ ಹಣಕ್ಕೆ ಬೇಡಿಕೆ ಇಟ್ಟಿದ್ದಾರೆ. ಈ ಬಗ್ಗೆ ಮಂಗಳೂರು ಲೋಕಾಯುಕ್ತ ಪೊಲೀಸ್ ಠಾಣೆಯಲ್ಲಿ ಆರೋಪಿಗಳ ವಿರುದ್ಧ ಪ್ರಕರಣ ದಾಖಲಾಗಿದೆ.

ಶನಿವಾರ ಪೆರುವಾಯಿ ಗ್ರಾಮ ಪಂಚಾಯತ್ ಅಧ್ಯಕ್ಷೆ ನಫೀಸಾ ಮತ್ತು ಬಿಲ್ ಕಲೆಕ್ಟರ್ ವಿಲಿಯಂ ಅವರು ರೂ.10,000 ಲಂಚದ ಹಣವನ್ನು ಸ್ವೀಕರಿಸುವಾಗ ಲೋಕಾಯುಕ್ತ ಪೊಲೀಸರ ಬಲೆಗೆ ಬಿದ್ದಿದ್ದಾರೆ. ಇವರಿಬ್ಬರನ್ನು ವಶಕ್ಕೆ ಪಡೆದು ತನಿಖೆ ನಡೆಸಲಾಗುತ್ತಿದೆ.

ಮಂಗಳೂರು ಲೋಕಾಯುಕ್ತ ಎಸ್ಪಿ (ಪ್ರಭಾರ) ಕುಮಾರ್ ಚಂದ್ರ ನೇತೃತ್ವದಲ್ಲಿ ಡಿವೈಎಸ್ಪಿ ಡಾ. ಗಾನ ಪಿ. ಕುಮಾರ್, ಸುರೇಶ್ ಕುಮಾರ್ ಪಿ, ಇನ್ಸ್ಪೆಕ್ಟರ್ ಭಾರತಿ, ಚಂದ್ರಶೇಖರ್ ಕೆ.ಎನ್, ರವಿ ಪವಾರ್ ಸೇರಿದಂತೆ ಹಲವರು ಕಾರ್ಯಾಚರಣೆಯಲ್ಲಿ  ಭಾಗಿಯಾಗಿದ್ದರು.

About The Author

Leave a Reply

Your email address will not be published. Required fields are marked *

You cannot copy content of this page.