ಬೆಂಗಳೂರು : ಬೆಂಗಳೂರು ಕುಂದಲಹಳ್ಳಿ ಗೇಟ್ ಬಳಿ ಬೇಕರಿಯೊಂದಕ್ಕೆ ನುಗ್ಗಿ ಬೈಂದೂರು ಮೂಲದ ಹುಡುಗರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಪುಡಿರೌಡಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಬಂಧಿತರನ್ನು ಪ್ರಕರಣಕ್ಕೆ ಸಂಬಂಧಿಸಿದಂತೆ ಡೆಲಿವರಿ ಬಾಯ್ ಕಾರ್ತಿಕ್(20), ಅಲ್ಯೂಮಿನಿಯಂ ವರ್ಕ್ ಮಾಡುವ ಸಲ್ಮಾನ್(20) ಖಾಸಗಿ ಹೊಟೇಲ್ ಮ್ಯಾನೇಜರ್ ಕಾರ್ತಿಕ್(23) ಮೂವರು ಆರೋಪಿಗಳನ್ನು ಬಂಧಿಸಿ ವಿಚಾರಣೆ ನಡೆಸಲಾಗಿದ್ದು, ತನಿಖೆ ಮುಂದುವರಿದಿದೆ ಎಂದು ವೈಟ್‌ಫೀಲ್ಡ್ ಡಿಸಿಪಿ ಗಿರೀಶ್ ತಿಳಿಸಿದ್ದಾರೆ. ಉಡುಪಿಯ ಬೈಂದೂರು ಮೂಲದ ನವೀನ್ ಕುಮಾರ್ ಹಾಗೂ ಪ್ರಜ್ವಲ್ ಶೆಟ್ಟಿ, ನಿತೀನ್ ಶೆಟ್ಟಿ ಎಂಬುವರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಲಾಗಿದೆ. ಈ ಘಟನೆ ಅಂಗಡಿಯಲ್ಲಿದ್ದ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.
ಡಿ.8 ರಾತ್ರಿ 11.30 ರ ಸಮಯದಲ್ಲಿ 7-8 ಜನರ ರೌಡಿಗಳ ಗುಂಪು ಕುಂದಲಹಳ್ಳಿ ಗೇಟ್ ಬಳಿಯಿರುವ ಬ್ರಹ್ಮಲಿಂಗೇಶ್ವರ ಬೇಕರಿಗೆ ಟೀ ಕುಡಿಯಲು ಮತ್ತು ಸಿಗರೇಟ್ ಸೇದಲು ಹೋಗಿದ್ದಾರೆ. ಬೇಕರಿಯವರು ಸಿಗರೇಟ್ ನೀಡಿ ಹಣ ಕೇಳಿದ್ದಾರೆ. ಹಣ ಕೇಳಿದ್ದಕ್ಕೆ ಬೇಕರಿ ಹುಡುಗರಿಗೆ ಪುಡಿ ರೌಡಿಗಳು ಅವ್ಯಾಚ್ಯ ಶಬ್ಧಗಳಿಂದ ನಿಂದಿಸುತ್ತಾ, ಮನಸೋ ಇಚ್ಚೆ ಹಿಗ್ಗಾಮುಗ್ಗಾ ಥಳಿಸಿ ಹಣ ತೆಗೆದುಕೊಂಡು ಪರಾರಿಯಾಗಿದ್ದರು. ಹಲ್ಲೆಗೊಳಗಾದವರು ಎಚ್‌ಎಎಲ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.