ಚಿಕ್ಕಮಗಳೂರು: ಪತ್ನಿಗೆ ವರದಕ್ಷಿಣೆ ಕಿರುಕುಳ ನೀಡಿರುವುದಲ್ಲದೇ ಹಲ್ಲೆ ಮಾಡಿರುವ ಆರೋಪ ಸಂಬಂಧ ಕಳಸ ಪೊಲೀಸ್ ಠಾಣೆಯ ಪಿಎಸ್ಸೈ ನಿತ್ಯಾನಂದಗೌಡ ಅವರನ್ನು ಅಮಾನತು ಮಾಡಿ ಪಶ್ಚಿಮ ವಲಯದ ಐಜಿಪಿ ಅಮಿತ್ ಸಿಂಗ್ ಆದೇಶಿಸಿದ್ದಾರೆ.
ಜ.17ರಂದು ರಾತ್ರಿ ಕಳಸ ಪೊಲೀಸ್ ಠಾಣೆಯ ಪಿಎಸ್ಸೈ ನಿತ್ಯಾನಂದ ಅವರು ಪಟ್ಟಣದ ಪೊಲೀಸ್ ವಸತಿಗೃಹದಲ್ಲಿ ತನ್ನ ಮೇಲೆ ಹಲ್ಲೆ ಮಾಡಿರುವುದಲ್ಲದೇ 50 ಲಕ್ಷ ರೂ. ವರದಕ್ಷಿಣೆ ನೀಡಬೇಕು ಎಂದು ಕಿರುಕುಳ ನೀಡಿದ್ದಾರೆ ಎಂದು ಆರೋಪಿಸಿ ಪಿಎಸ್ಸೈ ಪತ್ನಿ ಅಮಿತಾ ಎಂಬವರು ಕಳಸ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.
ಈ ದೂರಿನ ಮೇರೆಗೆ ಪೊಲೀಸರು ಎಫ್‌ಐಆರ್ ದಾಖಲಿಸಿದ್ದರು. ಪತಿ ನಿತ್ಯಾನಂದಗೌಡ ಅವರೊಂದಿಗೆ ನಿತ್ಯಾನಂದಗೌಡ ತಾಯಿ ಪ್ರೇಮಾ, ಸಹೋದರಿ ಮೇನಕಾ, ಸಹೋದರ ಸೂರ್ಯಾನಂದ ಹಾಗೂ ಮೇನಕಾ ಪತಿ ಚಂದ್ರಕಾಂತ್ ಕೊಠಾರಿ ಎಂಬವರ ವಿರುದ್ಧ ಅಮಿತಾ ದೂರು ದಾಖಲಿಸಿದ್ದರು. ಪತ್ನಿಯ ದೂರಿನ ಬೆನ್ನಿಗೆ ಪಿಎಸ್ಸೈ ನಿತ್ಯಾನಂದ ಕೂಡ ಅಮಿತಾ ವಿರುದ್ಧವೂ ಕಳಸ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.
ದೂರಿನ ಹಿನ್ನೆಲೆಯಲ್ಲಿ ಠಾಣೆಯಲ್ಲಿ ದಂಪತಿ ವಿರುದ್ಧ ದೂರು ಪ್ರತಿದೂರು ದಾಖಲಾಗಿತ್ತು. ಈ ಪ್ರಕರಣ ಸಂಬಂಧ ರವಿವಾರ ಪಶ್ಚಿಮ ವಲಯದ ಐಜಿಪಿ ಅಮಿತ್‌ಸಿಂಗ್ ಕಳಸ ಪೊಲೀಸ್ ಠಾಣೆಯ ಪಿಎಸ್ಸೈ ನಿತ್ಯಾನಂದ ಅವರನ್ನು ಅಮಾನತುಗೊಳಿಸಿ ಆದೇಶಿಸಿದ್ದಾರೆ.