December 6, 2025
th (2)

ಬೆಂಗಳೂರು: ಸುಳ್ಳು, ವಂಚನೆ, ನಕಲಿ, ಲೂಟಿ ಮತ್ತು ಪ್ರಚಾರ ಮೋದಿ ಸರ್ಕಾರದ ಮೂಲಮಂತ್ರಗಳು. ಪ್ರಧಾನಿ ನರೇಂದ್ರ ಮೋದಿ ಹಾಗೂ ಬಿಜೆಪಿ ಕಳೆದ ಹತ್ತು ವರ್ಷದಿಂದ ಮೋಸದಿಂದಲೇ ಚುನಾವಣೆಗಳನ್ನು ಗೆದ್ದಿದ್ದಾರೆ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ವಾಗ್ದಾಳಿ ನಡೆಸಿದ್ದಾರೆ. ಕೆಪಿಸಿಸಿ ಕಚೇರಿಯಲ್ಲಿ ಮಾಜಿ ಪ್ರಧಾನಿ ಇಂದಿರಾ ಗಾಂಧಿ ಸಂಸ್ಮರಣೆ ಹಾಗೂ ಉಕ್ಕಿನ ಮನುಷ್ಯ ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ ಜನ್ಮದಿನ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಖರ್ಗೆ ಅವರು ಕೇಂದ್ರ ಸರ್ಕಾರ ಹಾಗೂ ಬಿಜೆಪಿ ವಿರುದ್ಧ ಕಿಡಿಕಾರಿದ್ದಾರೆ.

‘ಹರಿಯಾಣದಲ್ಲಿ ರಾತ್ರೋರಾತ್ರಿ ಬದಲಾವಣೆ ಮಾಡಿಕೊಂಡರು. ಮತ ಎಣಿಕೆ ವೇಳೆ ಕಾಂಗ್ರೆಸ್‌ 66 ಸ್ಥಾನದಿಂದ ಏಕಾಏಕಿ 33 ಸ್ಥಾನಕ್ಕೆ ಬರಲು ಸಾಧ್ಯವೇ?. ಇಡೀ ವಿಶ್ವದಲ್ಲಿ ಬೆರಳೆಣಿಕೆ ದೇಶಗಳಲ್ಲಿ ಬಿಟ್ಟು ಎಲ್ಲಾ ದೇಶಗಳಲ್ಲೂ ಬ್ಯಾಲೆಟ್ ಪೇಪರ್‌ ಮೂಲಕವೇ ಚುನಾವಣೆ ನಡೆಸುತ್ತಾರೆ. ಇವಿಎಂ ಹ್ಯಾಕ್ ಮಾಡಬಹುದು ಎಂದು ಎಲಾನ್ ಮಸ್ಕ್‌ ಅವರೇ ಹೇಳಿದ್ದಾರೆ. ಇದನ್ನು ನಾವು ಹೇಳಿದರೆ ಸಾಬೀತುಪಡಿಸಿ ಎನ್ನುತ್ತಾರೆ ಅಥವಾ ಸಿದ್ದರಾಮಯ್ಯ ಗೆದ್ದಾಗ ಏನೂ ಇರಲಿಲ್ಲವೇ ಎನ್ನುತ್ತಾರೆ. ಯಾರಿಗೆ ಎಲ್ಲಿ ಹೇಗೆ ಮಾಡಬೇಕು ಎಂಬುದೂ ಸಹ ಪ್ರೋಗ್ರಾಂ ಮಾಡಿರುತ್ತಾರೆ’ ಎಂದು ಗಂಭೀರ ಆರೋಪ ಮಾಡಿದರು. ‘ಹರಿಯಾಣ ಮತ ಎಣಿಕೆ ವೇಳೆ 66 ಸೀಟಿನಿಂದ ಒಂದೂವರೆ ತಾಸಿನಲ್ಲಿ ಏಕಾಏಕಿ 33 ಸೀಟಿಗೆ ಬರಲು ಸಾಧ್ಯವೇ? ನರೇಂದ್ರ ಮೋದಿ ಅವರು ಯಾವ ಚುನಾವಣೆಯಲ್ಲೂ ನಿಜವಾಗಿ ಗೆದ್ದಿಲ್ಲ ಎಂಬುದು ಇದರಿಂದ ಗೊತ್ತಾಗುತ್ತದೆ.

ಎಲ್ಲವೂ ಮೋಸದಿಂದಲೇ ಗೆದ್ದಿದ್ದಾರೆ. ಮತದಾರರ ಪಟ್ಟಿಯಲ್ಲಿ 10-20 ಸಾವಿರ ಹೆಸರು ಸೇರಿಸುವುದು ಅಥವಾ 10-20 ಸಾವಿರ ತೆಗೆಸುವುದು. ಇಲ್ಲವೇ 10-20 ಸಾವಿರ ಮತದಾರರನ್ನು ಮತ ಚಲಾಯಿಸದಂತೆ ಮಾಡುವುದು. ಇನ್ನು ಯಾವ ದೇಶದಲ್ಲೂ ಇಲ್ಲದ ಇವಿಎಂ ಯಂತ್ರ ಬಳಸುವುದು. ಇವೆಲ್ಲವೂ ನರೇಂದ್ರ ಮೋದಿ ಅವರ ಪಕ್ಷದ ಕೆಲಸಗಳು’ ಎಂದು ದೂರಿದರು. ಬಿಜೆಪಿಯವರಿಗೆ ಲೋಕಸಭೆ ಚುನಾವಣೆಯಲ್ಲಿ 25-30 ಹೆಚ್ಚು ಸೀಟ್‌ಗಳು ಬಂದಿದ್ದರೆ ಸಂವಿಧಾನ ಬದಲಾವಣೆ ಮಾಡುವ ಅವಕಾಶ ಸಿಗುತ್ತಿತ್ತು. ನಾವು ಸಿಂಗಲ್‌ ಪಾರ್ಟಿ ಬಹುಮತ ಬರಲು ಬಿಟ್ಟಿಲ್ಲ. ಒಂದು ಹಂತಕ್ಕೆ ನಾವು ಯಶಸ್ವಿಯಾಗಿದ್ದೇವೆ ಎಂದರು. ದೇಶವು ಒಕ್ಕೂಟವಾಗಿರಲು, ದೇಶದ ಐಕ್ಯತೆಗೆ ಇಂದಿರಾ ಗಾಂಧಿ ಪ್ರಾಣ ತ್ಯಾಗ ಮಾಡಿದರು. ಅವರು ತಮ್ಮ ಪ್ರಾಣ ಬಿಟ್ಟರೇ ಹೊರತು ಒಕ್ಕೂಟ ಸಿದ್ಧಾಂತ ಬಿಡಲಿಲ್ಲ. ಪ್ರಧಾನಿ ನರೇಂದ್ರ ಮೋದಿ ಅವರು ಅದನ್ನು ನೆನೆಯುವುದು ಬಿಟ್ಟು ಅರ್ಬನ್‌ ನಕ್ಸಲೈಟ್, ದೇಶದ ಅಭಿವೃದ್ಧಿ ನೋಡಲಿಲ್ಲ ಎಂದೆಲ್ಲಾ ಜರಿದಿದ್ದಾರೆ. ಅವರಿಗೆ ಒಳ್ಳೆಯ ಮನಸ್ಸಿದ್ದರೆ ಪ್ರಾಣ ತ್ಯಾಗ ಮಾಡಿದ್ದನ್ನು ನೆನೆಯಬೇಕಿತ್ತು. ಅವರ ಮನಸ್ಸಿನಲ್ಲಿ ಆಗಲಿ ಅಥವಾ ಅವರ ಪಕ್ಷದ ಜನರಲ್ಲಿ ವಿಷ ತುಂಬಿದೆ’ ಎಂದು ದೂರಿದರು. ಇನ್ನು ವಲ್ಲಭಭಾಯಿ ಪಟೇಲ್‌ ಅವರ ಹೆಸರನ್ನು ಕಾಂಗ್ರೆಸ್‌ನಿಂದ ಕಸಿಯಲು ಪ್ರಯತ್ನಿಸುತ್ತಿದ್ದಾರೆ. ಗಾಂಧೀಜಿ ಕೊಲೆಯಾದಾಗ ಆರ್‌ಎಸ್‌ಎಸ್‌ ನಿಷೇಧ ಮಾಡಿದ್ದವರು ವಲ್ಲಭಾಬಾಯ್‌ ಪಟೇಲ್‌. ಅವರಲ್ಲಿ ಕಾಂಗ್ರೆಸ್‌ ರಕ್ತ ಹರಿಯುತ್ತಿತ್ತು. ಅವರನ್ನು ನಮ್ಮಿಂದ ಕಸಿಯಲು ಸಾಧ್ಯವಿಲ್ಲ ಎಂದು ಹೇಳಿದರು. ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಸಚಿವರಾದ ರಾಮಲಿಂಗಾರೆಡ್ಡಿ, ಕೆ.ಎಚ್. ಮುನಿಯಪ್ಪ, ಪರಿಷತ್‌ ಸದಸ್ಯ ಬಿ.ಕೆ. ಹರಿಪ್ರಸಾದ್‌ ಸೇರಿದಂತೆ ಹಲವರು ಹಾಜರಿದ್ದರು.

About The Author

Leave a Reply

Your email address will not be published. Required fields are marked *

You cannot copy content of this page.