ಮಂಗಳೂರು: ಮಂಗಳೂರು ಆಟೋ ರಿಕ್ಷಾ ಸ್ಫೋಟ ಪ್ರಕರಣ ತನಿಖೆಗೆ 3 ವಿಶೇಷ ತಂಡಗಳನ್ನು ರಚಿಸಲಾಗಿದೆ ಎಂದು ತಿಳಿದುಬಂದಿದೆ.
ಮಂಗಳೂರು ಸಿಟಿ ಪೊಲೀಸ್ ಆಯುಕ್ತ ಎನ್.ಶಶಿಕುಮಾರ್ ಅವರು, ಪ್ರಕರಣದ ತನಿಖೆಗೆ ಮೂರು ವಿಶೇಷ ತಂಡಗಳನ್ನು ರಚಿಸಿದ್ದಾರೆ.
ಸ್ಪೋಟ ಪ್ರಕರಣಕ್ಕೆ ಸಂಬಂಧಿಸಿ ಪರಿಶೀಲನೆ ವೇಳೆ ಆಟೋದಲ್ಲಿ ಅನುಮಾನಾಸ್ಪದ ವಸ್ತುಗಳು ಪತ್ತೆಯಾಗಿವೆ. ಆಟೋದಲ್ಲಿ ಎರಡು ಬ್ಯಾಟರಿ, ನಟ್ಟು ಬೋಲ್ಟ್, ಸರ್ಕ್ಯೂಟ್ ರೀತಿಯ ವೈರಿಂಗ್ ಮಾಡಿರುವ ವಸ್ತು ಪತ್ತೆಯಾಗಿದೆ. ಸಿಕ್ಕ ವಸ್ತುಗಳನ್ನು ಎಫ್ಎಸ್ಎಲ್ ತಂಡ ಪರೀಕ್ಷೆಗೊಳಪಡಿಸಿದೆ.
ಈ ನಡುವೆ ಆಟೋದಲ್ಲಿ ಕುಳಿತಿದ್ದ ಪ್ರಯಾಣಿಕನ ಮೇಲೆ ಹಲವು ಅನುಮಾನಗಳು ವ್ಯಕ್ತವಾಗತೊಡಗಿವೆ. ಈತ ಮಂಗಳೂರು ಜಂಕ್ಷನ್ ರೈಲು ನಿಲ್ದಾಣದಿಂದ ಬರುತ್ತಿದ್ದ ಆಟೋವನ್ನು ಹತ್ತಿದ್ದ. ಘಟನಾ ಸ್ಥಳದ 1 ಕಿ.ಮೀ ದೂರದ ನಾಗುರಿ ಬಳಿ ಆಟೋ ಹತ್ತಿದ್ದು, ಸ್ಪೋಟದ ತೀವ್ರತೆಗೆ ಪ್ರಯಾಣಿಕನ ದೇಹದ ಅರ್ಧ ಭಾಗ ಸುಟ್ಟ ಗಾಯವಾಗಿದೆ.
ಕೈ, ಎದೆ, ಮುಖದ ಭಾಗಕ್ಕೆ ಗಾಯವಾಗಿದ್ದು ಸದ್ಯ ಗಂಭೀರ ಸ್ಥಿತಿಯಲ್ಲಿರುವ ಪ್ರಯಾಣಿಕನಿಗೆ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಗಾಯಾಳು ಕಾರ್ಮಿಕ ಉತ್ತರಪ್ರದೇಶ ನಿವಾಸಿಯಾಗಿರುವ ಶಂಕೆ ವ್ಯಕ್ತವಾಗಿದ್ದು ಪ್ರೇಮ್ ರಾಜ್ ಕನೋಗಿ ಎಂಬ ಹೆಸರಿನ ಗುರುತಿನ ಚೀಟಿ ಪತ್ತೆಯಾಗಿದೆ. ಆತನ ಬಾಕ್ಸ್, ಬ್ಯಾಗ್ನಿಂದಲೇ ಸ್ಫೋಟ ಸಂಭವಿಸಿರಬಹುದು ಎನ್ನಲಾಗಿದೆ.