

ವೇಣೂರು: ಧರ್ಮಸ್ಥಳ ಕ್ಷೇತ್ರಕ್ಕೆ ಬರುವ ಭಕ್ತಾಧಿಗಳಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಅಳದಂಗಡಿಯ ಸೌಮ್ಯ ರೆಸಿಡೆನ್ಸಿ ಪ್ರವಾಸಿಗರಿಗೆ ಅತ್ಯಂತ ಪ್ರಯೋಜನಕಾರಿಯಾಗಿದೆ. ರಾಜಕೀಯ, ಸಹಕಾರ, ಕಲೆ, ಉದ್ಯಮ ಮುಂತಾದ ಕ್ಷೇತ್ರಗಳಲ್ಲಿ ಗುರುತಿಸಿಕೊಂಡಿರುವ ಸುಂದರ ಹೆಗ್ಡಯವರು ಸೌಮ್ಯ ಸ್ವಭಾವದ ಬಹುವ್ಯಕ್ತಿತ್ವ ಉಳ್ಳವರಾಗಿದ್ದು, ಸಮಾಜಕ್ಕೆ ಇವರ ಕೊಡುಗೆ ಇನ್ನಷ್ಟು ದೊರಕುವಂತಾಗಲಿ ಎಂದು ಶಾಸಕ ಹರೀಶ್ ಪೂಂಜ ಹೇಳಿದರು.
ಅಳದಂಗಡಿಯ ಹೃದಯಭಾಗದಲ್ಲಿ ನಿರ್ಮಿಸಲಾದ ಸೌಮ್ಯ ರೆಸಿಡೆನ್ಸಿ ಬೋರ್ಡಿಂಗ್ ಆಂಡ್ ಲಾಡ್ಜಿಂಗ್ ರೀಜೆಂಟ್ ಫ್ಯಾಮಿಲಿ ರೆಸ್ಟೋರೆಂಟ್ ಇದರ ಉದ್ಘಾಟನೆಯನ್ನು ಬುಧವಾರ ನೆರವೇರಿಸಿ ಅವರು ಮಾತನಾಡಿ, ಸಂಸ್ಥೆಯಲ್ಲಿ ಸುಮಾರು ೫೦ ಮಂದಿಗೆ ಉದ್ಯೋಗ ನೀಡಿ ಅವರ ಕುಟುಂಬಕ್ಕೆ ಹೊಸಬೆಳಕು ನೀಡಿದಂತಾಗಿದೆ. ನನ್ನ ನವಬೆಳ್ತಂಗಡಿಯ ಕನಸಿಗೆ ಇದು ಪೂರಕವಾಗಿದೆ ಎಂದರು.
ಅಳದಂಗಡಿ ಶ್ರೀ ಸತ್ಯದೇವತೆ ದೈವಸ್ಥಾನದ ಆಡಳಿತ ಮೊಕ್ತೇಸರರಾದ ಶಿವಪ್ರಸಾದ್ ಅಜಿಲ ಅವರು ದ್ವೀಪಬೆಳಗಿಸಿ ಮಾತನಾಡಿ, ಬೇರೆಬೇರೆ ಜಿಲ್ಲೆಗಳಿಂದ ಸತ್ಯದೇವತೆ ದೇವಸ್ಥಾನದಲ್ಲಿ ಕೋಲ ನೆರವೇರಿಸುವ ಭಕ್ತರಿಗೆ ರಾತ್ರಿವೇಳೆ ತಂಗಲು ರೂಮಿನ ಕೊರತೆಯನ್ನು ಸುಂದರ ಹೆಗ್ಡೆಯವರು ನೀಗಿಸಿದ್ದಾರೆ. ಭಕ್ತರಿಗೆ ಇದು ಅನುಕೂಲವಾಗಲಿ, ಕ್ಷೇತ್ರದ ಆಶೀರ್ವಾದ ಸುಂದರ ಹೆಗ್ಡೆಯವರ ಕುಟುಂಬಕ್ಕೆ ಇರಲಿ ಎಂದರು.
ಬಿಜೆಪಿ ಮಂಡಲ ಅಧ್ಯಕ್ಷ ಜಯಂತ್ ಕೋಟ್ಯಾನ್ ಅವರು ರೆಸ್ಟೋರೆಂಟ್‌ನ ಉದ್ಘಾಟನೆ ನೆರವೇರಿಸಿದರು. ಸುರೇಂದ್ರ ಹೆಗ್ಡೆ ಮುಂಬೈ ಅನಿಸಿಕೆ ವ್ಯಕ್ತಪಡಿಸಿದರು. ಅಳದಂಗಡಿ ಮಹಾಶಕ್ತಿ ಕೇಂದ್ರದ ಅಧ್ಯಕ್ಷ ಸದಾನಂದ ಪೂಜಾರಿ ಉಂಗಿಲಬೈಲು, ಕಟ್ಟಡ ಮಾಲಕರಾದ ಎಡ್ವರ್ಡ್ ಪಾಯಸ್, ಅಳದಂಗಡಿ ಪ್ರಾ.ಕೃ.ಪ.ಸ. ಸಂಘದ ಅಧ್ಯಕ್ಷ ಶಿವ ಭಟ್, ಸೌಮ್ಯ ಹೆಗ್ಡೆ, ಕು| ಸೌಮಿನಿ ಹೆಗ್ಡೆ, ಶಾರದ ಕುಮಾರ ಹೆಗ್ಡೆ, ಊರಿನ ಗಣ್ಯರು ಹಾಗೂ ಕುಟುಂಬ ವರ್ಗದವರು ಉಪಸ್ಥಿತರಿದ್ದರು.
ರೆಸಿಡೆನ್ಸಿ ಮಾಲಕರಾದ ಸುಂದರ ಹೆಗ್ಡೆ ಬಿ.ಇ. ಪ್ರಸ್ತಾವಿಸಿ ಸ್ವಾಗತಿಸಿ, ಸೌಜನ್ಯ ಹೆಗ್ಡೆ ಮಂಗಳೂರು ನಿರೂಪಿಸಿದರು. ನಿವೃತ್ತ ಅಬಕಾರಿ ಅಧೀಕ್ಷಕ ಎಂ. ಸದಾಶಿವ ಹೆಗ್ಡೆ ವಂದಿಸಿದರು.
ಸಂಸ್ಥೆ ವತಿಯಿಂದ ಶಾಸಕ ಹರೀಶ್ ಪೂಂಜ ಹಾಗೂ ಗುತ್ತಿಗೆದಾರ ದಯಾನಂದ ಕುಲಾಲ್ ಅಂಡಿಂಜೆ ಅವರನ್ನು ಹೆಗ್ಡೆ ಕುಟುಂಬ ಸಮ್ಮಾನಿಸಿ ಗೌರವಿಸಿದರು.
ReplyForward |