





ಕಾಶಿಪಟ್ಣ, ಮೇ 30: ಭಾರತೀಯ ಜೈನ್ ಮಿಲನ್ ಇಂದು ವಿಶ್ವವ್ಯಾಪಿ ಸಂಘಟನೆಯಾಗಿ ಬೆಳೆದಿದ್ದು, ಜಗತ್ತಿನಾದ್ಯಂತ ವಾಸಿಸುವ ಜೈನ ಬಾಂಧವರಲ್ಲಿ ಪರಸ್ಪರ ಪ್ರೀತಿ ವಿಶ್ವಾಸ ಮತ್ತು ಒಗ್ಗಟ್ಟನ್ನು ಮೂಡಿಸಲು ಶ್ರಮವಹಿಸುತ್ತಿದೆ. ಮುಂದಿನ ಪೀಳಿಗೆಗೆ ಧರ್ಮದ ತತ್ವಗಳ ಅರಿವು ಹಾಗೂ ಜೀವನ ಮೌಲ್ಯಗಳ ಬಗ್ಗೆ ತಿಳಿಯಪಡಿಸುವುದರ ಜತೆಗೆ ಸಂಸ್ಕಾರವನ್ನು ಬೆಳೆಸಲು ಹೆತ್ತವರು ಪ್ರಯತ್ನಿಸಬೇಕು. ಜೀವನ ಮಟ್ಟಗಳು ಮತ್ತು ಸಂಸ್ಕಾರವನ್ನು ಮಕ್ಕಳಲ್ಲಿ ಬೆಳೆಸುವಲ್ಲಿ ಹೆತ್ತವರೇ ನಿಜವಾದ ಆದರ್ಶರು ಎಂದು ಭಾರತೀಯ ಜೈನ್ ಮಿಲನ್ ನಿರ್ದೇಶಕ ಹಾಗೂ ಎಸ್ಡಿಎಂ ಶಿಕ್ಷಣ ಸಂಸ್ಥೆಗಳ ವಿದ್ಯಾರ್ಥಿ ಕ್ಷೇಮಪಾಲನಾ ಅಧಿಕಾರಿ ಬಿ. ಸೋಮಶೇಖರ ಶೆಟ್ಟಿ ಉಜಿರೆ ಹೇಳಿದರು.


ಕಾಶಿಪಟ್ಣ ಗ್ರಾಮದ ಕೇಳದಪೇಟೆ ಪಟ್ಲ ಶೆಟ್ರ ಮನೆಯಲ್ಲಿ ಜರಗಿದ ವೇಣೂರು ಜೈನ್ ಮಿಲನ್ನ ಮಾಸಿಕ ಸಭೆಯಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಅವರು ಮಾತನಾಡಿದರು.
ಅಧ್ಯಕ್ಷತೆಯನ್ನು ವೇಣೂರು ಮಿಲನ್ ಅಧ್ಯಕ್ಷ ಸುಕುಮಾರ್ ಜೈನ್ ವಹಿಸಿದ್ದರು. ವೇಣೂರು ಶ್ರೀ ದಿಗಂಬರ ಜೈನ ತೀರ್ಥಕ್ಷೇತ್ರ ಸಮಿತಿಯ ಕಾರ್ಯದರ್ಶಿ ವಿ. ಪ್ರವೀಣ್ಕುಮಾರ್ ಇಂದ್ರ, ಮಿಲನ್ ನಿರ್ದೇಶಕ ಬಿ. ಪ್ರಮೋದ್ ಕುಮಾರ್, ಪಿ. ಜಯರಾಜ್ ಕಂಬಳಿ, ಕೇಳ ಬಸದಿಯ ಪುರೋಹಿತ ಮಹಾವೀರ ಇಂದ್ರ, ವಿಜಯರಾಜ ಅಧಿಕಾರಿ, ಮೇಘರಾಜ ಶೆಟ್ಟಿ, ಮನೋರಮ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು. ಅತಿಥೇಯರುಗಳಾದ ಜಯಪ್ರಸಾದ್ ಜೈನ್ ಕೇಳದಪೇಟೆ ಹಾಗೂ ಅನುಷಾ ಜಯಪ್ರಸಾದ್ ಕೇಳದಪೇಟೆ ಉಪಸ್ಥಿತರಿದ್ದು, ಎಲ್ಲರನ್ನು ಸತ್ಕರಿಸಿದರು.


ಪ್ರಜ್ಞಾ ಜೈನ್ ಮತ್ತು ಪ್ರಾಪ್ತಿ ಜೈನ್ ಪ್ರಾರ್ಥಿಸಿದರು. ಜೈನ್ ಮಿಲನ್ ಉಪಾಧ್ಯಕ್ಷ ವ್ರಷಭರಾಜ ಅಜ್ರಿ ಸ್ವಾಗತಿಸಿದರು. ಮಿಲನ್ ಕಾರ್ಯದರ್ಶಿ ಬಿ. ನಿರ್ಮಲ್ ಕುಮಾರ್ ಜೈನ್ ವರದಿ ವಾಚಿಸಿದರು. ಜೈನ್ ಮಿಲನ್ ಮಾಜಿ ಕಾರ್ಯದರ್ಶಿ , ಉಪನ್ಯಾಸಕ ಮಹಾವೀರ್ ಜೈನ್ ಮೂಡುಕೋಡಿ ಕಾರ್ಯಕ್ರಮ ನಿರೂಪಿಸಿ, ಪ್ರಶಾಂತ್ ಕುಮಾರ್ ಜೈನ್ ಕರಿಮಣೇಲುಗುತ್ತು ವಂದಿಸಿದರು. ಬಳಿಕ ನೃತ್ಯ ಕಾರ್ಯಕ್ರಮ ಜರಗಿತು.
