ಹೊಸಂಗಡಿ, ಮೇ 25: ಇಲ್ಲಿಯ ಬಡಕೋಡಿ ದಂಡ್ಯೋಟ್ಟುವಿನ ಬ್ರಹ್ಮಶ್ರೀ ಮುಗೇರ ದೈವಸ್ಥಾನದ ದೈವಗಳ ಪುನರ್ ಪ್ರತಿಷ್ಠಾ ಬ್ರಹ್ಮಕಲಶೋತ್ಸವ ಸಮಿತಿ, ಜೀರ್ಣೋದ್ಧಾರ ಸಮಿತಿ ಹಾಗೂ ನೇಮೋತ್ಸವ ಸಮಿತಿ, ಬ್ರಹ್ಮಶ್ರೀ ಮುಗೇರ ದೈವಸ್ಥಾನ ಚಾರಿಟೇಬಲ್ ಟ್ರಸ್ಟ್ ದಂಡ್ಯೋಟ್ಟು ವತಿಯಿಂದ ದೈವಗಳ ಪುನರ್ ಪ್ರತಿಷ್ಠಾ ಬ್ರಹ್ಮಕಲಶೋತ್ಸವ ಹಾಗೂ ದೈವಗಳ ನೇಮೋತ್ಸವವು ವಿಜೃಂಭನೆಯಿಂದ ನಡೆಯಿತು.
ಮೇ. ೨೦ರಂದು ಪಡ್ಯಾರಬೆಟ್ಟದ ಬಳಿಯಿಂದ ಬೃಹತ್ ಹೊರೆಕಾಣಿಕೆ ಮೆರವಣಿಗೆಯು ಶ್ರೀ ಕ್ಷೇತ್ರಕ್ಕೆ ಅತ್ಯಂತ ವೈಭವದಿಂದ ಜರಗಿತು. ಪಡ್ಯಾರಬೆಟ್ಟ ದೈವಸ್ಥಾನದ ಅನುವಂಶಿಕ ಆಡಳಿತ ಮೊಕ್ತೇಸರ ಎ. ಜೀವಂದರ ಕುಮಾರ್ ಅವರು ಹೊರೆಕಾಣಿಕೆ ಮೆರವಣಿಗೆಗ ಚಾಲನೆ ನೀಡಿದರು.
ಮೇ. ೨೧ರಂದು ಶ್ರೀ ಕ್ಷೇತ್ರ ಪೂಂಜಾ ದೇವಸ್ಥಾನದ ಕೃಷ್ಣ ಪ್ರಸಾದ್ ಅಸ್ರಣ್ಣ ಅವರ ನೇತೃತ್ವದಲ್ಲಿ ದೇವತಾ ಪ್ರಾರ್ಥನೆ ನಡೆಯಿತು. ಬೆಳಿಗ್ಗೆ ಗಣಹೋಮ, ೧೦೮ ಕಲಶ ಪ್ರತಿಷ್ಠೆ, ಕ್ಷೇತ್ರಕ್ಕೆ ದೈವಗಳ ಭಂಡಾರ ಆಗಮನ, ನಂತರ ದೈವಗಳಿಗೆ ಬ್ರಹ್ಮಕಲಶಾಭಿಷೇಕ ಮಹಾಪೂಜೆ ಜರಗಿತು. ಸಂಜೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ ಮನೀಶ್ ಮತ್ತು ತಂಡದಿಂದ ಕಾಮಿಡಿ ಶೋ ನಡೆಯಿತು. ರಾತ್ರಿ ಕಟೀಲು ಲಕ್ಷ್ಮೀನಾರಾಯಣ ಅಸ್ರಣ್ಣರು ಧಾರ್ಮಿಕ ಸಭಾ ಕಾರ್ಯಕ್ರಮ ಉದ್ಘಾಟಿಸಿ ಆಶೀರ್ವಚನ ನೀಡಿ, ಊರವರ ಒಗ್ಗಟ್ಟಿನಿಂದ ಪುರಾತನ ದೈವಸ್ಥಾನವೊಂದು ಅಭಿವೃದ್ಧಿ ಆಗಿದೆ. ಉತ್ತಮ ಮನಸ್ಸುಳ್ಳ ಸಮಿತಿಯವರಿಂದ ದೈವವೇ ಈ ಕೆಲಸವನ್ನು ಮಾಡಿಸಿದೆ. ಊರಿನಲ್ಲಿ ಶಾಂತಿ, ನೆಮ್ಮದಿ, ಸಮೃದ್ಧಿ ಮನೆಮಾಡಲಿ, ಕಟೀಲು ಶ್ರೀದೇವಿಯ ಹಾಗೂ ಇಲ್ಲಿ ಎಲ್ಲಾ ಪರಿವಾರ ದೈವಗಳ ಆಶೀರ್ವಾದ ಇಡೀ ಊರಿಗೆ ಲಭಿಸುವಂತಾಗಲಿ ಎಂದರು.
ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಸುಧಾಕರ ಪಿ. ನೂಯಿ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಮೂಡಬಿದ್ರೆ ಧನಲಕ್ಷ್ಮೀ ಸಮೂಹ ಸಂಸ್ಥೆಯ ಶ್ರೀಪತಿ ಭಟ್, ಹೊಸಂಗಡಿ ಗ್ರಾಮ ಪಂಚಾಯತ್ ಅಧ್ಯಕ್ಷ ಕರುಣಾಕರ ಪೂಜಾರಿ, ಡಾ. ಕೆ.ಆರ್. ಪ್ರಸಾದ್ ಬಡಕೋಡಿಗುತ್ತು, ಬಾಲಕೃಷ್ಣ ಭಟ್ ಡದ್ದು ಕರಿಮಣೆಲು, ಹೇಮಂತ್ ಭಟ್ ಅರ್ಜಲು, ವೀರೇಂದ್ರ ಕುಮಾರ್ ಬೂಡುಂಗಳ ಬೆಟ್ಟುಗುತ್ತು, ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷ ಮಹಾಬಲ ಪೂಜಾರಿ, ಲಿಂಗಪ್ಪ ಪೂಜಾರಿ ಪಾದೆ ಬಡಕೋಡಿ, ಕೃಷಿಕ ಪದ್ಮಪೂಜಾರಿ ನೂಯಿ, ಗ್ರಾಮ ಪಂಚಾಯತ್ ಸದಸ್ಯರಾದ ಹರಿಪ್ರಸಾದ್ ಪಿ., ಲೋಕೇಶ್, ಪ್ರಮೀಳಾ ಉಪಸ್ಥಿತರಿದ್ದರು.
ಬ್ರಹ್ಮಕಲಶೋತ್ಸವ ಸಮಿತಿ ಪ್ರಧಾನ ಕಾರ್ಯದರ್ಶಿ ಶ್ರೀಪತಿ ಉಪಾಧ್ಯಾಯ ಸಂಪಿಗೆದಡಿ ಸ್ವಾಗತಿಸಿ, ಸಂತೋಷ್ ಸಿದ್ಧಕಟ್ಟೆ ನಿರೂಪಿಸಿ ವಂದಿಸಿದರು.
ದೈವಗಳ ನೇಮೋತ್ಸವ
ಧಾರ್ಮಿಕ ಸಭೆಯ ಬಳಿಕ ಧರ್ಮರಸು ನೆಲ್ಲರಾಯ ದೈವದ ನೇಮೋತ್ಸವ ನಡೆಯಿತು. ಮೇ. ೨೨ರಂದು ಬ್ರಹ್ಮಶ್ರೀ ಮುಗೇರ ಹಾಗೂ ತನ್ನಿಮಾನಿಗ ದೈವಗಳ ನೇಮೋತ್ಸವ ಜರುಗಿತು. ಮೇ. ೨೩ರಂದು ಬೆಳಿಗ್ಗೆ ಅಲೇರ ಪಂಜುರ್ಲಿ ದೈವದ ನೇಮೋತ್ಸವ, ಮಧ್ಯಾಹ್ನ ಕೊರಗಜ್ಜ ದೈವದ ನೇಮೋತ್ಸವ ಜರಗಿತು. ಕಾರ್ಯಕ್ರಮದ ಯಶಸ್ಸಿಗೆ ಪದಾಧಿಕಾರಿಗಳು, ಸಂಘ ಸಂಸ್ಥೆಗಳ ಪದಾಧಿಕಾರಿಗಳು ಸಹಕಾರ ನೀಡಿದರು.
ಕ್ಷೇತ್ರದ ಧ್ವನಿಸುರುಳಿ ಬಿಡುಗಡೆ
ಸವಾರ್ಥ್ ಎಸ್. ಜೈನ್ ವೇಣೂರು ರಾಗ ಸಂಯೋಜನೆ ನೀಡಿ ಪ್ರವೀಣ್ ಸೂರ್ಯ ಹೊಸಂಗಡಿ ಅವರ ಸಾಹಿತ್ಯದ ದಂದ್ಯೊಟ್ಟು ಮಣ್ಣ್‌ದ ಮಾಯೊದ ಬ್ರಹ್ಮಮುಗೇರ ದೈವೊಲು ಎಂಬ ಕ್ಷೇತ್ರದ ತುಳುಭಕ್ತಿಗೀತೆಯನ್ನು ಬಿಡುಗಡೆಗೊಳಿಸಲಾಯಿತು.