



ಮರೋಡಿ, ಮೇ 27: ಚಿರತೆ ಇದೆ ಎಂದು ಸುದ್ದಿ ಹಬ್ಬಿದರೆ ಸಾಕು ಜನ ಭಯಭೀತರಾಗುತ್ತಾರೆ. ಆದರೆ ಮರೋಡಿಯಲ್ಲಿ ವಾಹನದಲ್ಲಿ ಸಂಚರಿಸುತ್ತಿದ್ದ ಪ್ರಮಾಣಿಕರಿಗೆ ದಾರಿಮಧ್ಯೆ ಚಿರತೆ ಎದುರಾಗಿದ್ದು, ಅದರ ಚಲನವಲನದ ದೃಶ್ಯವನ್ನು ಮೊಬೈಲ್‌ನಲ್ಲಿ ಸೆರೆ ಹಿಡಿದಿದ್ದಾರೆ.
ಕುತ್ಲೂರು ಗ್ರಾಮದ ಬಜಿಲಪಾದೆ ಸಮೀಪ ಗುರುವಾರ ರಾತ್ರಿ ಬೃಹತ್ ಗಾತ್ರದ ಚಿರತೆಯೊಂದು ಪ್ರತ್ಯಕ್ಷವಾಗಿದೆ. ಬಜಿಲಪಾದೆ-ಮರೋಡಿ ರಸ್ತೆಯಲ್ಲಿ ಸಾಗುತ್ತಿದ್ದ ಬೈಕ್ ಸವಾರರು ಚಿರತೆಯನ್ನು ವೀಕ್ಷಿಸಿ, ಮೊಬೈಲ್‌ನಲ್ಲಿ ವಿಡಿಯೋ ಮಾಡುವ ಸಾಹಸ ಮಾಡಿದ್ದಾರೆ.
ಕುತ್ಲೂರು, ಮರೋಡಿ ಗ್ರಾಮದ ಸುತ್ತಮುತ್ತ ಹಲವು ದಿನಗಳಿಂದ ಜನರಿಗೆ ಚಿರಿತೆ ಕಾಣಿಸಿಕೊಳ್ಳುತ್ತಿದ್ದು, ಜನ ಸಾಮಾನ್ಯವಾಗಿ ಆತಂಕಕ್ಕೆ ಒಳಗಾಗಿದ್ದಾರೆ. ನಾಡುಪ್ರದೇಶದಲ್ಲಿ ಕಾಣಿಸಿಕೊಳ್ಳುವ ಚಿರತೆಯನ್ನು ಸೆರೆಹಿಡಿಯುವಂತೆ ಗ್ರಾಮಸ್ಥರು ಅರಣ್ಯ ಇಲಾಖೆಯ ಅಧಿಕಾರಿಗಳನ್ನು ಆಗ್ರಹಿಸಿದ್ದಾರೆ.
ಚಿರತೆ ಕಾಣಿಸಿಕೊಂಡಿದ್ದ ಪ್ರದೇಶದಲ್ಲಿ ಬೋನ್ ಇಡಲಾಗಿದ್ದು, ಚಿರತೆ ಮತ್ತೆ ನಾಡುಪ್ರದೇಶಕ್ಕೆ ಬಂದರೆ ಬೋನ್‌ಗೆ ಬೀಳುವ ಸಾಧ್ಯತೆ ಇದೆ ಎಂದು ವೇಣೂರು ಅರಣ್ಯಾಧಿಕಾರಿ ಮಾಹಿತಿ ನೀಡಿದ್ದಾರೆ.
