
ಬೆಳ್ತಂಗಡಿ, ಎ. 23: ಸುಮಾರು 700 ಕೋಟಿ ರೂ. ಅನುದಾನದಲ್ಲಿ ಪುಂಜಾಲಕಟ್ಟೆಯಿಂದ ಚಾರ್ಮಾಡಿ ತನಕದ 33.1 ಕಿಮೀ ವ್ಯಾಪ್ತಿಯ ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಕಾರ್ಯ ನಡೆಯುತ್ತಿದೆ.
ಇದರ ಅಂಗವಾಗಿ ಸಾಕಷ್ಟು ಸಮೀಕ್ಷೆಗಳು ನಡೆದಿದ್ದು, ರಸ್ತೆ ಅಗಲೀಕರಣದ ವೇಳೆ ತೆರವುಗೊಳ್ಳಬೇಕಾದ ಮರ, ಕಟ್ಟಡಗಳ ಗುರುತಿಸುವಿಕೆ ಅಗತ್ಯ ಸ್ಥಳಗಳಲ್ಲಿ ಸೇತುವೆ ನಿರ್ಮಾಣದ ರೂಪುರೇಷೆ ಇತ್ಯಾದಿ ಸಿದ್ದಗೊಂಡಿದೆ. ರಸ್ತೆ ವ್ಯಾಪ್ತಿಯನ್ನು ಗುರುತಿಸಿ ಸರಕಾರಿ ಜಾಗದ ಮೂಲಕ ಹಾದು ಹೋಗುವ ರಸ್ತೆಯ ಸ್ಥಳಗಳ ಗಿಡಗಂಟಿ ತೆರವು ಕೆಲಸವು ಪೂರ್ಣಗೊಂಡಿದೆ. ಈಗ ಮುಂಡಾಜೆ ಗ್ರಾಮದ ಸೀಟು ಪ್ರದೇಶದಲ್ಲಿ ರಸ್ತೆಯನ್ನು ಅಗಲಗೊಳಿಸುವ ಕೆಲಸ ನಡೆಯುತ್ತಿದೆ. ಮುಖ್ಯ ರಸ್ತೆಯ ಸೆಂಟ್ರಲ್ ಮಾರ್ಕ್ನಿಂದ ರಸ್ತೆಯ ಒಂದು ಬದಿಯನ್ನು ಸುಮಾರು ೭ ಮೀಟರ್ನಷ್ಟು ಅಗಲಗೊಳಿಸಲಾಗುತ್ತಿದೆ.
