ಬಳಂಜ, ಎ. 21: ಚೊಕ್ಕದಾದ ಉದ್ಯಾನವನ.. ಪೌಷ್ಠಿಕ ತೋಟ.. 605 ಅಡಿಕೆ ಸಸಿ… ಇದು ಯಾವುದೋ ಮನೆಯ ಕತೆ ಎಂದು ಊಹಿಸಬೇಡಿ. ಇದು ವೇಣೂರು ಹೋಬಳಿಯ ಬಳಂಜ ಗ್ರಾಮ ಪಂಚಾಯತ್‌ನ ಹೊರಾಂಗಣದ ನೋಟ!
ಹೌದು, ಬಳಂಜ ಗ್ರಾ.ಪಂ. ಕಚೇರಿಗೆ ಹೋದಾಗ ವಿಐಪಿಗಳ ಮನೆಗೆ ಹೋದ ಅನುಭವವಾಗುತ್ತದೆ. ಎದುರು ಭಾಗದಲ್ಲಿ ಚೊಕ್ಕದಾದ ಉದ್ಯಾನವನ ನಿರ್ಮಿಸಲಾಗಿದೆ. ಒಂದು ಬದಿಯಲ್ಲಿ ಪೌಷ್ಠಿಕ ತೋಟ, ಪಂಚಾಯತ್ ಹಿಂಬದಿಯಲ್ಲಿ ಬರೊಬ್ಬರಿ 605 ಅಡಿಕೆ ಗಿಡ ನಾಟಿ ಮಾಡಲಾಗಿದ್ದು, ಹನಿ ನೀರಾವರಿ ವ್ಯವಸ್ಥೆ ಕಲ್ಪಿಸಲಾಗಿದೆ.
ಪಂಚಾಯತು ಕಚೇರಿಯೂ ಅಷ್ಟೆ. ಅಚ್ಚುಕಟ್ಟಾದ ಪಂಚಾಯತು ಕಚೇರಿ, ಅದಕ್ಕೊಂದು ಸಭಾಂಗಣ, ಅತ್ಯುತ್ತಮ ಗ್ರಂಥಾಲಯ, ಗ್ರಾಮಕರಣಿಕ ಕಛೇರಿಮ ಸಂಜೀವಿನಿ ಕಟ್ಟಡ, ಆರೋಗ್ಯ ಸಹಾಯಕರ ಕಛೇರಿ…. ಎಲ್ಲವೂ ಇದೆ. ಕಛೇರಿ ಸಂಪೂರ್ಣ ಸೋಲಾರ್ ಶಕ್ತಿಯಿಂದ ಕಾರ್ಯಾಚರಿಸುತ್ತಿದೆ.
ತ್ಯಾಜ್ಯ ವಿಲೇವಾರಿ ಘಟಕ ಇದೆ. ಸಾರ್ವಜನಿಕ ಹಿಂದೂರುದ್ರಭೂಮಿ ಇದೆ. ಹೇಳಿ ಕೇಳಿ ಬಳಂಜ ಪಂಚಾಯತ್ ಅತ್ಯಲ್ಪ ಆದಾಯ ಇರುವ ಸಿ ಗ್ರೇಡ್ ಪಂಚಾಯತ್. ಆದರೂ ವಿವಿಧ ಮೂಲವನ್ನು ಬಳಸಿ ಪಂಚಾಯತನ್ನು ಅಂದಗೊಳಿಸಿದ್ದಲ್ಲದೆ ಗ್ರಾಮದ ಅಭಿವೃದ್ಧಿಯ ಆದಾಯಕ್ಕಾಗಿ ತೋಟಗಾರಿಕೆ ನಿಜಕ್ಕೂ ಶ್ಲಾಘನೀಯ.