ಆರಂಬೋಡಿ, ಎ. 20: ಆರಂಬೋಡಿ ಗ್ರಾ.ಪಂ. ಕಚೇರಿಯ ಎದುರಿನ ರಸ್ತೆಯ ಅಣತಿ ದೂರದಲ್ಲಿ ಮದ್ಯದ ಬಾಟಲಿಗಳು, ಪ್ಲಾಸ್ಟಿಕ್ ತ್ಯಾಜ್ಯದ ರಾಶಿ ಕಂಡು ಬಂದಿದ್ದು, ಪಂಚಾಯತ್ ಆಡಳಿತ ಸ್ವಚ್ಛತೆಯ ಬಗ್ಗೆ ಜಾಣಕುರುಡು ಪ್ರದರ್ಶಿಸಿದೆಯೇ ಅನ್ನುವ ಅನುಮಾನ ಸಾರ್ವಜನಿಕರನ್ನು ಕಾಡುತ್ತಿದೆ.
ಒಂದೆಡೆ ಸ್ವಚ್ಛ ಭಾರತ್ ಪರಿಕಲ್ಪನೆಯಡಿ ಪ್ರಧಾನಿ ನರೇಂದ್ರ ಮೋದಿಯವರು ದೇಶಾದ್ಯಂತ ಸ್ವಚ್ಛತೆಗೆ ಸಾಕಷ್ಟು ಕಾರ್ಯಕ್ರಮಗಳನ್ನು ಕೈಗೊಂಡಿದ್ದರೆ ಇತ್ತ ಕೆಲ ಪಂಚಾಯತ್‌ಗಳು ಸ್ವಚ್ಛತೆಗೆ ನಿರ್ಲಕ್ಷ್ಯ ವಹಿಸುತ್ತಿರುವುದು ಕಂಡು ಬರುತ್ತಿದೆ. ಸ್ಥಳೀಯ ಕೇವಲ 20, 25 ಮೀ. ಅಂತರದಲ್ಲೇ ಪುಟಾಣಿಗಳ ಅಂಗನವಾಡಿ ಕೇಂದ್ರವಿದ್ದು, ಈ ಬಾಟಲಿ ತ್ಯಾಜ್ಯಗಳ 100 ಮೀ. ಅಂತರದಲ್ಲಿ ಸರಕಾರಿ ಪ್ರಾಥಮಿಕ ಶಾಲೆಯೂ ಇದ್ದು, ವಿದ್ಯಾರ್ಥಿಗಳಿಗೆ ಮದ್ಯದ ಬಾಟಲಿ ರಾಶಿ ನಿತ್ಯ ದರ್ಶನ ಆಗುತ್ತಿದೆ.
ಪಂಚಾಯತ್ ಕಚೇರಿ ಎದುರಿನ ರಸ್ತೆಯ ವಿರುದ್ಧ ದಿಕ್ಕಿನ ಅಂಗಡಿಯೊಂದರ ಮುಂದೆ ಈ ರೀತಿ ತ್ಯಾಜ್ಯವನ್ನು ರಾಶಿ ಹಾಕಲಾಗಿದ್ದು, ತಕ್ಷಣ ಪಂಚಾಯತ್ ಕಾರ್ಯಪ್ರವೃತ್ತವಾಗಿ ವಿಲೇಗೊಳಿಸುವ ಕೆಲಸ ಮಾಡಿಸಬೇಕಿದೆ.