ವೇಣೂರು, ಎ. 18: ಒಂದೆಡೆ ನೀರಿನ ಸಮಸ್ಯೆ, ಮತ್ತೊಂದೆಡೆ ವಿದ್ಯುತ್ ಕೊರತೆ. ಮೊದಲೇ ಬಿಸಿಲಿನ ಬೇಗೆಯಿಂದ ಬಸವಳಿದಿರುವ ಜನ ಈ ಎಲ್ಲದರ ಸಮಸ್ಯೆಯಿಂದ ಅಕ್ಷರಶಃ ಕಂಗಲಾಗಿದ್ದಾರೆ.
ಆದರೆ ಸಮಸ್ಯೆ ಇರುವುದು ಮೆಸ್ಕಾಂ ಅಧಿಕಾರಿಗಳಲ್ಲಿ ಅಲ್ಲ. 33 ಕೆ.ವಿ. ವಿದ್ಯುತ್ ಬರುತ್ತಿರುವ ವೇಣೂರು ಮೆಸ್ಕಾಂ ಗರಿಷ್ಠ ಪ್ರಮಾಣದಲ್ಲಿ ತನ್ನ ವ್ಯಾಪ್ತಿಗೆ ವಿದ್ಯುತ್ ಸರಬರಾಜು ಮಾಡುತ್ತಿದೆ. ಬೇಡಿಕೆಯ ಸಾಮಾರ್ಥ್ಯಕ್ಕೆ ಅನುಗುಣವಾಗಿ ವೇಣೂರು ಶಾಖೆಯಲ್ಲಿ ಟಿ.ಸಿ. ಇಲ್ಲದಿರುವುದು ವಿದ್ಯುತ್ ಕಣ್ಣಾಮಚ್ಚಾಲೆ ಆಟವಾಡಲು ಪ್ರಮುಖ ಕಾರಣ ಎನ್ನುತ್ತಾರೆ ಅಧಿಕಾರಿಗಳು.
2018ರಲ್ಲಿ ಆರಂಭವಾದ ವೇಣೂರು ಮೆಸ್ಕಾಂ ಉಪಕೇಂದ್ರಕ್ಕೆ ಅಂದು ಸಾಮಾರ್ಥ್ಯಕ್ಕೆ ಅನುಗುಣವಾಗಿ ೫ ಮೆ.ವ್ಯಾ.ನ ಎರಡು .ಟಿ.ಸಿ. ಅಳವಡಿಸಲಾಗಿತ್ತು. ಆದರೆ ಇಂದು ಮನೆ, ಪಂಪ್‌ಶೆಡ್ ಸೇರಿದಂತೆ ಕೈಗಾರಿಕೋದ್ಯಮಗಳು ಜಾಸ್ತಿಯಾಗಿ ಅನಿಯಮಿತವಾಗಿ ಲೋಡ್ ಶೆಡ್ಡಿಂಗ್‌ಗೆ ಕಾರಣ ಆಗುತ್ತಿದೆ. ಇದೀಗ ಮಳೆ ಬಂದರೆ ತಾತ್ಕಾಲಿಕವಾಗಿ ಸಮಸ್ಯೆ ನಿವಾರಣೆ ಆಗಲಿದೆ. ಅಗತ್ಯವಿರುವ ೧೨.೫ ಮೆಗಾವ್ಯಾಟ್ ಟಿ.ಸಿ.ಗೆ ಮೆಸ್ಕಾಂ ಅಧಿಕಾರಿಗಳು ಡಿಪಿಆರ್ ಮಾಡಿ ಸರಕಾರಕ್ಕೆ ಕಳುಹಿಸಿಕೊಟ್ಟಿದ್ದು, ಅನುಮೋದನೆ ದೊರೆತ್ತಿದೆ. ಮುಂದಿನ ಬೇಸಿಗೆ ಕಾಲಕ್ಕೆ ಸಮಸ್ಯೆ ನಿವಾರಣೆ ಆಗಲಿದೆ. ಅಲ್ಲದೆ ನಾರಾವಿ ಸಮೀಪದ ಕುತ್ಲೂರಿನಲ್ಲಿ ಕೆಪಿಟಿಸಿಎಲ್‌ನ ವಿದ್ಯುತ್ ಉಪಕೇಂದ್ರದ ಕಾಮಗಾರಿ ಆಗುತ್ತಿದ್ದು, ಅಲ್ಲಿ ಉಪಕೇಂದ್ರ ಸ್ಥಾಪನೆಯ ಬಳಿಕ ಅಳದಂಗಡಿ, ಮರೋಡಿ, ನಾರಾವಿ, ಕುತ್ಲೂರು, ಸುಲ್ಕೇರಿ ಮುಂತಾದ ಭಾಗಗಳಿಗೆ ಅಲ್ಲಿಂದಲೇ ವಿದ್ಯುತ್ ಪೂರೈಕೆ ಆಗಲಿದ್ದು, ವೇಣೂರು ಮೆಸ್ಕಾಂಗೆ ಲೋಡ್ ಮತ್ತಷ್ಟು ಕಡಿಮೆಯಾಗಿ ಸಮಸ್ಯೆ ನಿವಾರಣೆ ಆಗುವ ಸಾಧ್ಯತೆಗಳಿವೆ. ಆದರೆ ಇತ್ತೀಚಿನಿಂದ ಐದು ನಿಮಿಷಕ್ಕೊಮ್ಮೆ ವಿದ್ಯುತ್ ಹೋಗಿ ಬರುತ್ತಿದ್ದು, ವಿದ್ಯುತ್ ಗ್ರಾಹಕರು ಬಹಳಷ್ಟು ಸಮಸ್ಯೆ ಎದುರಿಸುವಂತಾಗಿದೆ.
ಅನುಮೋದನೆ ದೊರೆತ್ತಿದೆ
ಮೆಸ್ಕಾಂ ಉಪಕೇಂದ್ರದಲ್ಲಿ ೫ ಮೆಗಾವ್ಯಾಟ್‌ಗಳ ೨ ಟಿ.ಸಿ. ಇದೆ. ಆದರೆ ಅದರ ಸಾಮಾರ್ಥ್ಯ ಇಂದಿನ ಬೇಡಿಕೆಗೆ ಸಾಕಾಗುತ್ತಿಲ್ಲ. ಅದರಿಂದ ಆಗಾಗ ಪವರ್‌ಕಟ್ ಆಗುತ್ತಿದೆ. ಶಾಖೆಯಲ್ಲಿನ ೫ ಮೆ.ವ್ಯಾ. ಸಾಮಾರ್ಥ್ಯದ ಬದಲಿಗೆ ೧೨.೫ ಮೆ.ವ್ಯಾ.ನ ಟಿ.ಸಿ. ಅಳವಡಿಸಬೇಕಿದೆ. ರೂ. ೧.೫೦ ಕೋಟಿ ಮೊತ್ತದ ಯೋಜನೆಗೆ ಡಿಪಿಆರ್ ಮಾಡಿ ಸರಕಾರಕ್ಕೆ ಕಳುಹಿಸಲಾಗಿದ್ದು, ಅನುಮೋದನೆ ದೊರೆತ್ತಿದೆ. ಟೆಂಡರ್ ಪ್ರಕಿಯೆಯ ಬಳಿಕ ಕಾಮಗಾರಿ ನಡೆಯಲಿದ್ದು, ಬಳಿಕ ಸಮಸ್ಯೆ ನಿವಾರಣೆ ಆಗಲಿದೆ.
– ಗಣೇಶ್ ನಾಯ್ಕ್, ಜೆ.ಇ. ವೇಣೂರು ಮೆಸ್ಕಾಂ