ಹೊಸಂಗಡಿ, ಎ. 16: ಹಿಂದಿನ ಕಾಲದ ಡಾಮಾರು ರಸ್ತೆಗಳು ಮೂರ್‍ನಾಲ್ಕು ವರ್ಷ ಬಾಳಿಕೆ ಬರುವ ದಿನಗಳಿತ್ತು. ಆದರೆ ಇಂದು ಡಾಮಾರು ರಸ್ತೆಗಳು ಒಂದೆರಡು ವರ್ಷಗಳಲ್ಲಿ ಎದ್ದುಹೋಗುತ್ತಿವೆ. ಉತ್ಪಾದನೆ ಆಗುವ ಡಾಮಾರೇ ಗುಣಮಟ್ಟವಿಲ್ಲದ ಕಾರಣ ಈ ತೀರಿ ಡಾಮಾರು ರಸ್ತೆ ಹಾಳಾಗಲು ಕಾರಣ ಅನ್ನುವುದನ್ನು ತಳ್ಳಿಹಾಕುವಂತಿಲ್ಲ. ಆದರೆ ಕಾಂಕ್ರಿಟ್ ರಸ್ತೆಯ ಗ್ಯಾರಂಟಿ ಕನಿಷ್ಠ 10 ವರ್ಷವಾದರೂ ಇರಬೇಕಲ್ಲವೇ? ಇಲ್ಲಾ ಅನ್ನುತ್ತಿವೆ ಹೊಸಂಗಡಿ ಗ್ರಾ.ಪಂ. ವ್ಯಾಪ್ತಿಯ ಬಲ್ಲಂಗೇರಿ ದೇಗುಲ ಸಮೀಪದ ಕಾಂಕ್ರಿಟ್ ರಸ್ತೆ!
ಸರಿಸುಮಾರು ಕಳೆದ ಒಂದು ವರ್ಷಗಳ ಹಿಂದೆಯಷ್ಟೇ ಬಲ್ಲಂಗೇರಿಯಲ್ಲಿ ಶಾಸಕರ ಅನುದಾನದಲ್ಲಿ ಈ ರಸ್ತೆಯನ್ನು ನಿರ್ಮಿಸಲಾಗಿದೆ. ಇದೀಗ ಸುಮಾರು 50 ಮೀ.ನಷ್ಟು ಉದ್ದಕ್ಕೆ ಕಾಂಕ್ರಿಟ್ ರಸ್ತೆ ಬಾಯಿಬಿಟ್ಟಿದ್ದು, ಬದಿಯಲ್ಲೇ ನದಿಯೂ ಇರುವ ಕಾರಣ ಮುಂದಿನ ದಿನಗಳಲ್ಲಿ ಅಪಾಯವನ್ನೂ ತಂದೊಡ್ಡುವ ಸಾಧ್ಯತೆಯನ್ನು ತಳ್ಳಿಹಾಕುವಂತಿಲ್ಲ. ಒಂದು ವರ್ಷದಲ್ಲೇ ಕಾಂಕ್ರಿಟ್ ರಸ್ತೆ ಈ ರೀತಿ ಬಿರುಕು ಬಿಡುವುದಕ್ಕೆ ಕಳಪೆ ಕಾಮಗಾರಿ ಕಾರಣವೋ ಅಥವಾ ಅಧಿಕ ಭಾರದ ವಾಹನಗಳ ಸಂಚಾರವೋ ಅನ್ನುವುದು ಇಂಜಿನಿಯರ್‌ಗಳ ಪರಿಶೀಲನೆಯ ಬಳಿಕವಷ್ಟೇ ಗೊತ್ತಾಗಬೇಕಿದೆ.