ವೇಣೂರು, ಜೂ. 10: ಶೈಕ್ಷಣಿಕ ಕ್ಷೇತ್ರಕ್ಕೆ ಅತ್ಯಾಧುನಿಕ ಸವಲತ್ತುಗಳ ಕೊಡುಗೆ ನೀಡುವ ನಿಟ್ಟಿನಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಪಿಎಂಶ್ರೀ ಯೋಜನೆ ಜಾರಿಗೆ ತಂದರು. ಅವರು ನೀಡಿರುವ ಕನಸಿನ ಯೋಜನೆ ಅಚ್ಚುಕಟ್ಟಾಗಿ ಅನುಷ್ಠಾನದ ವಿಶ್ವಾಸದಿಂದ ಬಜಿರೆಯನ್ನು ಆಯ್ಕೆ ಮಾಡಿದ್ದೇವೆ. ಇಲ್ಲಿಯ ಪೋಷಕರೆಲ್ಲರು ಸೇರಿ ನರೇಂದ್ರಮೋದಿಯವರಿಗೆ ಶಕ್ತಿ ತುಂಬುತ್ತೀರಿ ಎಂಬ ವಿಶ್ವಾಸವಿದೆ. ಗುಣಮಟ್ಟದ ಶಿಕ್ಷಣದಿಂದ ಇಲ್ಲಿಯ ಮಕ್ಕಳು ಆದರ್ಶ ಪುರುಷರಾಗಿ ಬೆಳೆಯಲಿ, ಪೋಷಕರಿಲ್ಲದ ಮಗುವನ್ನು ದತ್ತು ಪಡೆದ ತಾಯಂದಿರ ಸಮಿತಿ ಅದರ್ಶರು ಎಂದು ಶಾಸಕ ಹರೀಶ್ ಪೂಂಜ ಹೇಳಿದರು.
ಅವರು ಇಂದು ಕೇಂದ್ರ ಸರಕಾರದ ಪಿಎಂಶ್ರೀ (ಪ್ರಧಾನಮಂತ್ರಿ ಸ್ಕೂಲ್ ಫಾರ್ ರೈಸಿಂಗ್ ಇಂಡಿಯಾ) ಯೋಜನೆಗೆ ಆಯ್ಕೆಯಾಗಿರುವ ಬಜಿರೆ ಶಾಲೆಯಲ್ಲಿ ಯೋಜನೆಯ ಅನುಷ್ಠಾನದ ಎಲ್‌ಕೆಜಿ ತರಗತಿಗೆ ಚಾಲನೆ ನೀಡಿ ಮಾತನಾಡಿದರು.
ಯೋಜನೆಗೆ ಆಯ್ಕೆಯಾಗಿರುವ ಬಜಿರೆ ಶಾಲೆಯ ಚಿತ್ರಣ ಮುಂದಿನ ದಿನಗಳಲ್ಲಿ ಬದಲಾಗಿದ್ದು, ಗುಣಮಟ್ಟದ ಶಿಕ್ಷಣದಿಂದ ಇಲ್ಲಿಯ ಪ್ರತಿಮನೆಯ ಮಕ್ಕಳು ಸ್ವಾಮಿ ವಿವೇಕಾನಂದ, ಡಾ| ಅಂಬೇಡ್ಕರ್, ನರೇಂದ್ರ ಮೋದಿಯವರಂತೆ ಬೆಳೆಯಲಿ, ಪೋಷಕರಿಲ್ಲದ ಮಗುವನ್ನು ದತ್ತು ಪಡೆದ ಮಗುವಿಗೆ ನಾನೂ ವೈಯುಕ್ತಿಕ ನೆಲೆಯಲ್ಲಿ ಸಹಕಾರ ನೀಡುತ್ತೇನೆ ಎಂದು ಶಾಸಕರು ಹೇಳಿದರು.
ವೇಣೂರು ಗ್ರಾ.ಪಂ. ಅಧ್ಯಕ್ಷ ನೇಮಯ್ಯ ಕುಲಾಲ್ ಅಧ್ಯಕ್ಷತೆ ವಹಿಸಿದ್ದರು. ಕ್ಷೇತ್ರ ಶಿಕ್ಷಣಾಧಿಕಾರಿ ವಿರುಪಾಕ್ಷಪ್ಪ ಎಚ್.ಎಸ್., ವಿವೇಕಾನಂದ ಸೇವಾ ಟ್ರಸ್ಟ್ ಅಧ್ಯಕ್ಷ, ನಿವೃತ್ತ ಉಪನ್ಯಾಸಕ ಯಂ. ವಿಜಯರಾಜ ಅಧಿಕಾರಿ, ಗ್ರಾ.ಪಂ. ಸದಸ್ಯರಾದ ಅರುಣ್ ಕ್ರಾಸ್ತ, ಸುನಿಲ್ ಕುಮಾರ್, ಮಲ್ಲಿಕಾ, ಜಯಂತಿ, ಎಸ್‌ಡಿಎಂಸಿ ಅಧ್ಯಕ್ಷ ದಿನೇಶ್ ಪೂಜಾರಿ, ಸಿಆರ್‌ಪಿ ರಾಜೇಶ್, ದಾನಿಗಳಾದ ಲೋಕೇಶ್ ಎ. ಕೋರ್ಲೋಡಿ, ನವೀನ್ ಪೂಜಾರಿ ಪಚ್ಚೇರಿ, ತಾಯಂದಿರ ಸಮಿತಿ ಅಧ್ಯಕ್ಷೆ ಜಯಶ್ರೀ, ಎಸ್‌ಡಿಎಂಸಿ ಸದಸ್ಯರು, ಶಿಕ್ಷಕವೃಂದ ಮತ್ತಿತರರು ಉಪಸ್ಥಿತರಿದ್ದರು.
ಮುಖ್ಯಶಿಕ್ಷಕಿ ಕಮಲಾಜಿ ಎಸ್. ಜೈನ್ ಪ್ರಾಸ್ತಾವಿಸಿ ಸ್ವಾಗತಿಸಿದರು. ಶಿಕ್ಷಕಿಯರಾದ ನಾಗವೇಣಿ ಮತ್ತು ಅಶ್ವಿನಿ ನಿರೂಪಿಸಿ, ಶಿಕ್ಷಕಿ ಗ್ರೇಸಿ ಪ್ಲಾವ್ಲಾ ವಂದಿಸಿದರು.