ವೇಣೂರು, ಜೂ. 9: ಅಂಬಾಸಿಡರ್ ಕಾರು ಚಲಾಯಿಸಿ ವೇಣೂರಿನ ಜನತೆಗೆ ಅಪತ್ಭಾಂಧವರಾಗಿ ಕಳೆದ ನಾಲ್ಕೈದು ದಶಕಗಳಲ್ಲಿ ಸೇವೆ ನೀಡುತ್ತಿದ್ದ ಬೈರಣ್ಣ (84) ಅವರು ನಿನ್ನೆ ರಾತ್ರಿ ಹೃದಯಾಘಾತದಿಂದ ವೇಣೂರು ಕೆಳಗಿನ ಪೇಟೆಯ ಬಾಡಿಗೆ ಮನೆಯಲ್ಲಿ ನಿಧನ ಹೊಂದಿದರು.
ಮೂಲತಃ ಮಂಗಳೂರು ಗುರುಪುರದವರಾಗಿರುವ ಇವರು ಸರಿಸುಮಾರು 1976ರಲ್ಲಿ ವೇಣೂರಿನಲ್ಲಿ ಕಾರು ಚಾಲಕರಾಗಿ ವೃತ್ತಿ ಆರಂಭಿಸಿದ್ದರು. ಬಸ್, ವಾಹನಗಳ ವ್ಯವಸ್ಥೆಯೇ ಇಲ್ಲದ ಕಾಲದಲ್ಲಿಯೂ ಅಂದು ಬೈರಣ್ಣನ ಅಂಬಾಸಿಡರ್ ಕಾರಿನಲ್ಲಿ ಪ್ರಯಾಣ ಮಾಡದಿರುವವರು ತುಂಬಾ ವಿರಳ ಎಂದೇ ಹೇಳಬಹುದು. ಸುಧೀರ್ಘ ಕಾಲದವರೆಗೂ ವೇಣೂರಿನಲ್ಲಿ ಅಂಬಾಸಿಡರ್ ಕಾರು ಚಲಾಯಿಸಿ ಅದೆಷ್ಟೋ ರೋಗಿಗಳಿಗೆ, ಗರ್ಭಿಣಿಯವರಿಗೆ ಅಪದ್ಭಾಂದವರಾದವರು. ಇವರ ಕಾರಿನಲ್ಲಿ ಮಕ್ಕಳನ್ನು ಕೂರಿಸಲು ಪೋಷಕರೂ ಹಿಂದೇಟು ಹಾಕುತ್ತಿರಲಿಲ್ಲ. ಕಾರಣ ಸುರಕ್ಷತೆಯ ಚಾಲನೆ ಇವರದ್ದಾಗಿತ್ತು. ತೀರಾ ಸೌಮ್ಯ ಸ್ವಭಾವದವರಾಗಿದ್ದ ಇವರ ಅಗಲುವಿಕೆಯು ವೇಣೂರು ಜನತೆಗೆ ಅರಗಿಸಿಕೊಳ್ಳಲಾಗಷ್ಟು ನೋವುಂಟು ಮಾಡಿದೆ. ಅಗಲಿದ ಹಿರಿಯ ಜೀವಿ ಆಪತ್ಭಾಂಧವ ಬೈರಣ್ಣನವರ ಆತ್ಮಕ್ಕೆ ಶಾಂತಿ ದೊರೆಯಲಿ ಎಂದು ಇಲ್ಲಿಯ ಜನತೆ ಪ್ರಾರ್ಥಿಸುತ್ತಿದ್ದಾರೆ.