May 26, 2025 8:35:52 PM
badakody dandyottu copy

ಹೊಸಂಗಡಿ, ಮೇ 6: ಸರಿಸುಮಾರು 200 ವರ್ಷಗಳ ಇತಿಹಾಸ ಇರುವ ಹೊಸಂಗಡಿ ಗ್ರಾ.ಪಂ. ವ್ಯಾಪ್ತಿಯ ಬಡಕೋಡಿ ಗ್ರಾಮದ ದಂದ್ಯೊಟ್ಟು ಬ್ರಹ್ಮಶ್ರೀ ಮುಗೇರ ದೈವಸ್ಥಾನಕ್ಕೆ ಜೀರ್ಣೋದ್ಧಾರದ ಪರ್ವಕಾಲ ಕೂಡಿಬಂದಿದ್ದು, ಬ್ರಹ್ಮಕಲಶೋತ್ಸವಕ್ಕೆ ದಿನಗಣನೆ ಆರಂಭವಾಗಿದೆ. ಜಾತಿ, ಮತ ಬೇಧವೆನ್ನದೆ ಎಲ್ಲರ ಕೂಡುವಿಕೆಯಿಂದ ಇದೀಗ ಜೀಣೋದ್ಧಾರ ಕಾರ್ಯ ಭಾಗಶಃ ಪೂರ್ಣಗೊಂಡಿದ್ದು, ಇದೇ ತಿಂಗಳ ಮೇ 20ರಿಂದ 23ರವರೆಗೆ ದೈವಗಳ ಪುನರ್ ಪ್ರತಿಷ್ಠಾ ಬ್ರಹ್ಮಕಲಶೋತ್ಸವ ಹಾಗೂ ನೇಮೋತ್ಸವ ವಿಜ್ರಂಭನೆಯಿಂದ ಜರಗಲಿದೆ.

ಕ್ಷೇತ್ರದ ಇತಿಹಾಸ
ಬಡಕೋಡಿ ಗ್ರಾಮದ ದಂಡ್ಯೊಟ್ಟು ಎಂಬಲ್ಲಿ ಬಡಕೋಡಿ, ಹೊಸಂಗಡಿ, ಕರಿಮಣೇಲು ಗ್ರಾಮದ ಹಿರಿಯರು, ಗುತ್ತು ಬರ್ಕೆಯವರು ಮತ್ತು ಮುಗೇರ ಸಮುದಾಯದವರು ಸುಮಾರು ೨೦೦ ವರ್ಷಗಳ ಹಿಂದಿನಿಂದ ಮುಗೇರ ಸಮುದಾಯದ ಆರಾಧ್ಯ ದೈವಗಳಾದ ಬ್ರಹ್ಮಶ್ರೀ ಮುಗೇರ ಹಾಗೂ ಪರಿವಾರ ದೈವಗಳಾದ ಧರ್ಮರಸು ನೆಲ್ಲರಾಯ, ಅಲೇರ ಪಂಜುರ್ಲಿ, ಮಹಾಕಾಳಿ ಹಾಗೂ ಕೊರಗಜ್ಜ ದೈವಗಳನ್ನು ಆರಾಧಿಸುತ್ತಾ ಬಂದಿದ್ದರು.

ಗುತ್ತು ಬರ್ಕೆಯ ಊರಿನ ಪ್ರಮುಖರು ಮತ್ತು ಮುಗೇರ ಸಮುದಾಯದವರು ದೈವಸ್ಥಾನ ಸಮಿತಿಯನ್ನು ರಚನೆ ಮಾಡಿ ಸಮುದಾಯ ಹಾಗೂ ಊರವರ ಸಹಕಾರದೊಂದಿಗೆ ವರ್ಷಂಪ್ರತಿ ಜಾತ್ರೆ, ನೇಮೋತ್ಸವ, ತಿಂಗಳ ಸಂಕ್ರಮಣ, ಪೂಜಾ ವಿಧಿ ವಿಧಾನಗಳನ್ನು ನಡೆಸುತ್ತಾ ಬಂದಿದ್ದರು.

ಬಡಕೋಡಿ ಗ್ರಾಮದ ನೇರಳಗುಡ್ಡೆ ಎಂಬಲ್ಲಿ ಸುಮಾರು ೨೦೦ ವರ್ಷಗಳ ಹಿಂದೆ ಬಡಕೋಡಿ ಗುತ್ತು, ಬರ್ಕೆಯ ಹಿರಿಯರು ಮತ್ತು ಊರಿನ ಗಣ್ಯರು, ಸಮುದಾಯದ ಹಿರಿಯರು, ಸಂಪಿಗೆದಡಿ ಹಿರಿಯ ಪುರೋಹಿತರ ಪೌರೋಹಿತ್ಯದಲ್ಲಿ ಬ್ರಹ್ಮಶ್ರೀ ಮುಗೇರ ಹಾಗೂ ನೆಲ್ಲರಾಯ ಧರ್ಮರಸು ದೈವಗಳನ್ನು ಕಲ್ಲು ಹಾಕಿ ಪ್ರತಿಷ್ಠಾಪಿಸಿ, ಪೂಜಾ ವಿಧಿ ವಿಧಾನಗಳನ್ನು ಬಡಕೋಡಿ ಗುತ್ತಿನ ಮುಂದಾಳತ್ವದಲ್ಲಿ ಪೂಜಾ ತಂತ್ರಿಯವರ ಹಾಗೂ ಬರ್ಕೆಯವರ ಹಾಗೂ ಸಮುದಾಯದವರ ಸಹಕಾರದಲ್ಲಿ ಸುಮಾರು ೧೨೦ ವರ್ಷಗಳಲ್ಲಿ ನಡೆಸುತ್ತಾ ಬಂದಿದ್ದರು.

ಮುಳಿ ಹುಲ್ಲಿನಲ್ಲಿ ದೈವಗಳ ಗುಡಿ
ತದನಂತರ ತಂತ್ರಿವರ್ಯರ ಮಾರ್ಗದರ್ಶನದಂತೆ ಗುತ್ತು ಸಮುದಾಯದ ಹಿರಿಯರ ಮಾರ್ಗದರ್ಶನದಲ್ಲಿ ಬಡಕೋಡಿ ಗ್ರಾಮದ ದಂಡ್ಯೊಟ್ಟು ಎಂಬಲ್ಲಿ ಮುಳಿ ಹುಲ್ಲಿನಲ್ಲಿ ದೈವಗಳ ಗುಡಿಗಳನ್ನು ನಿರ್ಮಿಸಿ ದೈವಗಳನ್ನು ಪುನರ್ ಪ್ರತಿಷ್ಠಾಪಿಸಿ ಪೂಜಾ ವಿಧಿ ವಿಧಾನಗಳನ್ನು ನಡೆಸಿ ವಾರ್ಷಿಕ ಜಾತ್ರೋತ್ಸವವನ್ನು ನಡೆಸುತ್ತಾ ಬಂದಿದ್ದರು. ಕಾಲಕ್ರಮೇಣ ಹಂತಹಂತವಾಗಿ ಆಲೇರ ಪಂಜುರ್ಲಿ, ಮಹಾಕಾಳಿ ಹಾಗೂ ಕೊರಗಜ್ಜ ದೈವಗಳನ್ನು ಪ್ರತಿಷ್ಠಾಪಿಸಿ ಆರಾಧಿಸುತ್ತಾ ಬಂದಿದ್ದರು.

30 ವರ್ಷಗಳ ಬಳಿಕ ಇದೀಗ ನವೀಕರಣ
ಬ್ರಹ್ಮಶ್ರೀ ಮುಗೇರ ದೈವಸ್ಥಾನವು ಕಳೆದ ಸುಮಾರು 30 ವರ್ಷಗಳಿಂದ ನವೀಕರಣಗೊಳ್ಳದೆ ಇದ್ದು, ಇದೀಗ ಜೀರ್ಣೋದ್ಧಾರ ಸಮಿತಿಯನ್ನು ರಚನೆ ಮಾಡಿ ದೈವಗಳ ಗುಡಿಗಳ ನವೀಕರಣಕ್ಕಾಗಿ ಸುಮಾರು 50 ಲಕ್ಷ ರೂಪಾಯಿಗಳ ಅಂದಾಜು ಪಟ್ಟಿಯನ್ನು ತಯಾರಿಸಿ 2020ರ ನವೆಂಬರ್ ತಿಂಗಳಲ್ಲಿ ದೈವಸ್ಥಾನದ ನವೀಕರಣ ಕಾರ್ಯಕ್ಕೆ ಚಾಲನೆ ನೀಡಲಾಗಿತ್ತು.
ಹಂತಹಂತವಾಗಿ ದೈವಸ್ಥಾನದ ಜೀರ್ಣೋದ್ಧಾರದ ಅಭಿವೃದ್ಧಿ ಕಾಮಗಾರಿಗಳನ್ನು ನಡೆಸುತ್ತಾ ಇದೀಗ ಅಭಿವೃದ್ಧಿ ಕಾರ್ಯ ಭಾಗಶಃ ಪೂರ್ಣಗೊಂಡಿದ್ದು, ಬ್ರಹ್ಮಕಲಶೋತ್ಸವದ ಸಂಭ್ರಮದಲ್ಲಿದೆ.

About The Author

Leave a Reply

Your email address will not be published. Required fields are marked *

<p>You cannot copy content of this page.</p>