

ಬೆಂಗಳೂರು, ಜೂನ್ 04; ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪೂರ್ಣ ಬಹುಮತ ಪಡೆದು ಸರ್ಕಾರ ರಚನೆ ಮಾಡಿದೆ. ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ ಸರ್ಕಾರ ಮುನ್ನಡೆಸುತ್ತಿದ್ದಾರೆ. ಇಂದಿರಾ ಕ್ಯಾಂಟೀನ್ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಕನಸಿನ ಯೋಜನೆ. ಈಗ ಈ ಯೋಜನೆಯನ್ನು ಮತ್ತೆ ಕಾರ್ಯಗತಗೊಳಿಸುವ ಚರ್ಚೆ ಆರಂಭವಾಗಿದೆ.
ಬೆಂಗಳೂರು ನಗರದಲ್ಲಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಇಂದಿರಾ ಕ್ಯಾಂಟೀನ್ ಉಸ್ತುವಾರಿ ನೋಡಿಕೊಳ್ಳುತ್ತದೆ. ನಗರದಲ್ಲಿ ಹೊಸದಾಗಿ 50 ಇಂದಿರಾ ಕ್ಯಾಂಟೀನ್ ಆರಂಭಿಸಲು ಸಿದ್ಧತೆ ನಡೆದಿದೆ. ಈಗ ಕಾಂಗ್ರೆಸ್ ಸರ್ಕಾರವೇ ಅಸ್ತಿತ್ವದಲ್ಲಿ ಇರುವುದರಿಂದ ಕ್ಯಾಂಟೀನ್ ನಿರ್ವಹಣೆ ಮಾಡಲು ಅನುದಾನದ ಕೊರತೆ ಆಗುವುದಿಲ್ಲ ಎಂಬುದು ಲೆಕ್ಕಾಚಾರವಾಗಿದೆ.
2013ರ ಚುನಾವಣೆ ಬಳಿಕ ಕಾಂಗ್ರೆಸ್ ಸರ್ಕಾರ ಅಸ್ತಿತ್ವಕ್ಕೆ ಬಂದಿತ್ತು. 2017ರಲ್ಲಿ ಸಿದ್ದರಾಮಯ್ಯ ಇಂದಿರಾ ಕ್ಯಾಂಟೀನ್ ಯೋಜನೆಗೆ ಚಾಲನೆ ನೀಡಿದ್ದರು. ಆದರೆ ಬಳಿಕ ಇಂದಿರಾ ಕ್ಯಾಂಟೀನ್ ಯೋಜನೆಗೆ ಸರಿಯಾದ ಅನುದಾನ ಸಿಕ್ಕಿಲ್ಲ. ಬಡವರಿಗೆ ಕಡಿಮೆ ದರದಲ್ಲಿ ಆಹಾರ ಒದಗಿಸುವ ಉದ್ದೇಶದಿಂದ ಸ್ಥಾಪಿಸಲಾದ ಕ್ಯಾಂಟೀನ್‌ಗೆ ಬೀಗ ಜಡಿಯುವ ಪರಿಸ್ಥಿತಿ ನಿರ್ಮಾಣಗೊಂಡಿತು.
ವರದಿ ನೀಡಲು ಸೂಚನೆ
ಮುಖ್ಯಮಂತ್ರಿಯಾಗುತ್ತಿದ್ದಂತೆಯೇ ಸಿದ್ದರಾಮಯ್ಯ ಇಂದಿರಾ ಕ್ಯಾಂಟೀನ್‌ಗಳ ಸ್ಥಿತಿಗತಿಗಳ ಬಗ್ಗೆ ವರದಿ ನೀಡಲು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ವರದಿ ಆಧರಿಸಿ ಅವರು ಕ್ಯಾಂಟೀನ್‌ಗಳನ್ನು ಹೇಗೆ ಅಭಿವೃದ್ಧಿ ಮಾಡಬಹುದು ಎಂದು ಯೋಜನೆ ರೂಪಿಸಲಿದ್ದಾರೆ. ಇದರ ನಡುವೆಯೇ ಬೆಂಗಳೂರಿನಲ್ಲಿ 50 ಹೊಸ ಕ್ಯಾಂಟೀನ್ ತೆರೆಯಲು ಬಿಬಿಎಂಪಿ ಮುಂದಾಗಿದೆ.