ಪರ್ಕಳ: ಇಲ್ಲಿನ ಶ್ರೀಮಹಾಲಿಂಗೇಶ್ವರ ಮಹಾಗಣಪತಿ ದೇವಸ್ಥಾನದ ಎದುರುಗಡೆ ನಿರ್ಮಾಣವಾಗುತ್ತಿರುವ ಕೆರೆ ಈ ಬಾರಿಯೂ ಸಾಧಾರಣ ಮಳೆಗೇ ಕುಸಿದಿದೆ. ಸ್ಥಳಕ್ಕೆ ಉಡುಪಿ ಜಿಲ್ಲಾಧಿಕಾರಿ ವಿದ್ಯಾ ಕುಮಾರಿ ಭೇಟಿ ನೀಡಿ ಪರಿಶೀಲಿಸಿದರು. ಸಣ್ಣ ನೀರಾವರಿ ಇಲಾಖೆಯಿಂದ ಬಹುಕೋಟಿ ಅನುದಾನದಿಂದ ನಿರ್ಮಾಣವಾಗುತ್ತಿರುವ ಈ ಕರೆ ಈಗ ನಾಲ್ಕನೇ ಬಾರಿಯೂ ಕೆರೆದಂಡೆ ಕುಸಿಯಲು ಅವೈಜ್ಞಾನಿಕ ಕಾಮಗಾರಿ ಕಾರಣ ಎನ್ನಲಾಗುತ್ತಿದೆ. ಕೆರೆಯ ವಿನ್ಯಾಸ ಹಾಗೂ ಕಾಮಗಾರಿಯ ಗುಣಮಟ್ಟ ಕಳಪೆ ಎಂದು ಸ್ಥಳೀಯರು ದೂರಿದ್ದಾರೆ. ಮಳೆ ನೀರು ಹರಿದು ಹೋಗಲು ಸರಿಯಾದ ತೋಡು ಕೆರೆಯ ಅಕ್ಕಪಕ್ಕದಲ್ಲಿ ನಿರ್ಮಾಣ ಮಾಡದೇ ಇರುವುದು ಮತ್ತು ಈ ಬಾರಿ ಕೆರೆಯ ಪಕ್ಕದಲ್ಲಿ ಯಥೇಚ್ಛವಾಗಿ ಸುತ್ತಲ ಶೇಡಿಮಣ್ಣನ್ನು ತೆಗೆದಿರುವುದು ಮತ್ತು ಮರಗಳನ್ನು ಅಲ್ಲಿಂದ ತೆಗೆದಿರುವುದರಿಂದ ಮಣ್ಣು ಸವೆತವಾಗಿದೆ. ಉತ್ತಮ ಗುಣಮಟ್ಟದ ಜೊತೆಗೆ ವೈಜ್ಞಾನಿಕ ರೀತಿಯಲ್ಲಿ ಕಾಮಗಾರಿ ನಡೆಸಿ ಈ ಕೆರೆಯನ್ನು ಉಳಿಸುವಂತೆ ಜಿಲ್ಲಾಧಿಕಾರಿಗಳಿಗೆ ಸಾಮಾಜಿಕ ಕಾರ್ಯಕರ್ತ ಗಣೇಶ್ ರಾಜ್ ಮತ್ತು ಸ್ಥಳೀಯರು ಮನವಿ ಮಾಡಿದ್ದಾರೆ.