November 22, 2024
hq720

ಉಡುಪಿ: ಉಡುಪಿಯ ಸಾಂಪ್ರದಾಯಿಕ ಶೈಲಿಯ ಹುಲಿವೇಷ ಉಳಿಸುವ ಅಭಿಯಾನದ ಪ್ರಯುಕ್ತ ಸಮಾನ ಮನಸ್ಕ ಹುಲಿವೇಷ ತಂಡಗಳಿಂದ ರವಿವಾರ ಉಡುಪಿ ನಗರದಲ್ಲಿ ಪಾದಯಾತ್ರೆಯನ್ನು ಹಮ್ಮಿಕೊಳ್ಳಲಾಗಿತ್ತು.

ಜೋಡುಕಟ್ಟೆಯಿಂದ ಆರಂಭಗೊಂಡ ಪಾದಯಾತ್ರೆ ಕೋರ್ಟ್ ರಸ್ತೆ, ಹಳೇ ಡಯಾನ ಸರ್ಕಲ್, ಕೆಎಂ ಮಾರ್ಗ, ತೀವ್ರೇಣಿ ಸರ್ಕಲ್, ಸಂಸ್ಕೃತ ಕಾಲೇಜು ಮಾರ್ಗವಾಗಿ ರಥಬೀದಿಗೆ ಆಗಮಿಸಿತು. ಪಾದಯಾತ್ರೆ ಯಲ್ಲಿ ತಾಸೆ, ವಾದ್ಯ, ವಿಶೇಷ ಹಿಮ್ಮೇಳ, ಹುಲಿವೇಷ ತಂಡಗಳು ಗಮನ ಸೆಳೆದವು.

ಬಳಿಕ ಕೃಷ್ಣ ಮಠದಲ್ಲಿ ಪ್ರಾರ್ಥನೆ ಸಲ್ಲಿಸಿ ಸಾಂಪ್ರದಾಯಿಕ ಉಡುಪಿ ಶೈಲಿಯ ಹುಲಿ ಉಳಿಸುವ ಕುರಿತ ಮನವಿಯನ್ನು ಪರ್ಯಾಯ ಪುತ್ತಿಗೆ ಮಠದ ದಿವಾನ ನಾಗರಾಜ ಆಚಾರ್ಯ ಅವರಿಗೆ ಸಲ್ಲಿಸಲಾಯಿತು. ಈ ಪಾದಯಾತ್ರೆಯಲ್ಲಿ ಉಡುಪಿ, ಮಾರ್ಪಳ್ಳಿ, ಮೂಳೂರು, ಪೆರ್ಡೂರು, ಮಲ್ಪೆ, ಬ್ರಹ್ಮಾವರ, ಹಿರಿಯಡ್ಕ ಸೇರಿದಂತೆ ಜಿಲ್ಲೆಯ ವಿವಿಧೆಡೆಯ ಒಟ್ಟು 70-80 ಹುಲಿವೇಷ ತಂಡಗಳು ಭಾಗವಹಿಸಿದ್ದವು.

ಹುಲಿವೇಷ ತಂಡದ ಪ್ರಮುಖರಾದ ಸುಬ್ರಹ್ಮಣ್ಯ ಉಪಾಧ್ಯ ಮಾರ್ಪಳ್ಳಿ ಮಾತನಾಡಿ, ಇತ್ತೀಚಿನ ಕೆಲ ದಿನಗಳಿಂದ ಸಾಮಾಜಿಕ ಜಾಲತಾಣಗಳಲ್ಲಿ ಉಡುಪಿಯ ಸಾಂಪ್ರದಾಯಿಕ ಶೈಲಿಯ ಹುಲಿವೇಷದ ಬಗ್ಗೆ ಅಪಪ್ರಚಾರ ಮಾಡಲಾಗುತ್ತಿದೆ. ಆ ಹಿನ್ನೆಲೆಯಲ್ಲಿ ಈ ಪಾದಯಾತ್ರೆ ನಡೆಸುವ ಮೂಲಕ ಅಪಪ್ರಚಾರ ಮಾಡುತ್ತಿರುವವರು ಉಡುಪಿ ಶೈಲಿಯ ಹುಲಿವೇಷದ ಹಿನ್ನೆಲೆಯನ್ನು ತಿಳಿದು ಅಪಪ್ರಚಾರ ನಡೆಸುವುದನ್ನು ನಿಲ್ಲಿಸಲು ದೇವರು ಬುದ್ದಿ ನೀಡಲಿ ಎಂದು ಪ್ರಾರ್ಥನೆ ಸಲ್ಲಿಸಿದ್ದೇವೆ ಎಂದರು.

ಈ ಸಂದರ್ಭದಲ್ಲಿ ಕೃಷ್ಣಮೂರ್ತಿ ಆಚಾರ್ಯ ಕಿನ್ನಿಮುಲ್ಕಿ, ಮರಕಾಲು ಸುಧಾ, ಕಾಡಬೆಟ್ಟು ಸುರೇಂದ್ರ, ಕಿಶೋರ್‌ರಾಜ್, ವೀರ ಮಾರುತಿ ಭವಾನಿ ಶಂಕರ್, ಅಖಿಲೇಶ್, ಬೈಲಕೆರೆ ಸುನೀಲ್, ಮಲ್ಪೆ ಮಂಜು ಕೊಳ, ಪ್ರದೀಪ್ ಗರಡಿಮಜಲು, ಶ್ರೀಕಾಂತ್ ಲಕ್ಷ್ಮೀನಗರ, ರವಿ ಕಾಡಬೆಟ್ಟು, ದೀಪಕ್ ಲಕ್ಷ್ಮೀನಗರ ಮೊದಲಾದವರು ಉಪಸ್ಥಿತರಿದ್ದರು.

About The Author

Leave a Reply

Your email address will not be published. Required fields are marked *

You cannot copy content of this page.