ಉಡುಪಿ: ಉಡುಪಿ ನಗರಸಭಾ ವ್ಯಾಪ್ತಿಯಲ್ಲಿ ಅಳವಡಿಸಲಾದ ಬ್ಯಾನರ್, ಬಂಟಿಂಗ್ಸ್, ಕಟೌಟ್‌ಗಳು ಅವಧಿ ಮೀರಿರುವುದು ಕಂಡು ಬಂದಿದ್ದು ಅಂತಹ ಬ್ಯಾನರ್‌ಗಳನ್ನು ಸಂಬಂಧಪಟ್ಟವರು ಕೂಡಲೇ ತೆರವುಗೊಳಿಸಬೇಕು ಎಂದು ಉಡುಪಿ ನಗರಸಭೆಯ ಪೌರಾಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಬ್ಯಾನರ್ಸ್ ಮತ್ತು ಕಟೌಟ್‌ಗಳನ್ನು ಅಳವಡಿಸುವ ಪೂರ್ವದಲ್ಲಿ ಕರ್ನಾಟಕ ಮುನಿಸಿಪಲ್ ಆಕ್ಟ್ ನಂತೆ ನಗರಸಭೆ ಕಚೇರಿಯಿಂದ ಅನುಮತಿ ಪಡೆದುಕೊಂಡು ಪ್ರಾರಂಭ ದಿನಾಂಕ, ಮುಕ್ತಾಯ ದಿನಾಂಕ ಹಾಗೂ ಅನುಮತಿ ಪತ್ರ ಸಂಖ್ಯೆಯನ್ನು ನಮೂದಿಸಿ ಅಳವಡಿಸಬೇಕು ಹಾಗೂ ಗೋಡೆಗಳ ಮೇಲೆ ಸಾರ್ವಜನಿಕ ಭಿತ್ತಿಪತ್ರಗಳನ್ನು ಅಂಟಿಸಬಾರದು. ಅಂತಹ ಭಿತ್ತಿಪತ್ರಗಳನ್ನು ಅಂಟಿಸುವ ಮೊದಲು ಸೂಕ್ತ ಸ್ಥಳ ಗುರುತಿಸಿ ಅನುಮತಿ ಪಡೆದಕೊಂಡು ಅಂಟಿಸಬೇಕು. ಉಡುಪಿ ನಗರಸಭಾ ವ್ಯಾಪ್ತಿಯಲ್ಲಿ ಗೋಡೆಗಳ ಮೇಲೆ ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ಅನಧಿಕೃತ ಭಿತ್ತಿಪತ್ರಗಳನ್ನು ಅಂಟಿಸಿದ್ದಲ್ಲಿ ಯಾವುದೇ ಮುನ್ಸೂಚನೆ ನೀಡದೇ ತೆರವುಗೊಳಿಸಲಾಗುವುದು. ನಗರದ ಸೌಂದರ್ಯದ ದೃಷ್ಟಿಯಿಂದ ವಿವಿಧೆಡೆ ಭಿತ್ತಿಪತ್ರ ಅಳವಡಿಸುವುದನ್ನು ಕಡಿಮೆ ಮಾಡಬೇಕು. ವಿದ್ಯುತ್ ಕಂಬಗಳ ಮೇಲೆ, ಚಿಕ್ಕ ಚಿಕ್ಕ ಜಾಹೀರಾತು ಫಲಕಗಳನ್ನು ಅಳವಡಿಸಿರುವುದು ಕಂಡು ಬಂದಿದ್ದು, ಇಂತಹ ಅನಧಿಕೃತ ಜಾಹಿರಾತು ಫಲಕಗಳನ್ನು ತೆರವುಗೊಳಿಸಲಾಗುವುದು. ಬ್ಯಾನರ್ಸ್/ಕಟೌಟ್‌ಗಳನ್ನು ಮುದ್ರಿಸುವ ಮಾಲಕರು ಈ ಬಗ್ಗೆ ನಗರಸಭೆಯಿಂದ ಅನುಮತಿಯನ್ನು ಪಡೆದುಕೊಂಡು ನಿಗದಿತ ಸ್ಥಳದಲ್ಲಿ ಅಳವಡಿಸಬೇಕು ಹಾಗೂ ಅವಧಿ ಪೂರ್ಣಗೊಂಡ ಕೂಡಲೇ ತೆರವುಗೊಳಿಸುವಂತೆ ಉಡುಪಿ ನಗರಸಭೆಯ ಪೌರಾಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.