
ಉಡುಪಿ: ಉತ್ತರಕನ್ನಡದಲ್ಲಿ ಗುಡ್ಡ ಜರಿತದಿಂದ ದುರಂತ ಅಂತ್ಯ ಕಂಡಿದ್ದ ಕೇರಳದ ಲಾರಿ ಚಾಲಕ ಅರ್ಜುನ್ ಮೃತದೇಹವನ್ನು ತಡರಾತ್ರಿ ಉಡುಪಿಗೆ ತರಲಾಯಿತು. ನಗರದ ಚಿತ್ತರಂಜನ್ ಸರ್ಕಲ್ ನಲ್ಲಿ ಕೇರಳಸಮಾಜ ಬಾಂಧವರು ಮತ್ತು ಸಾರ್ವಜನಿಕರು ಮೃತದೇಹದ ಅಂತಿಮ ದರ್ಶನ ಪಡೆದರು. ಉತ್ತರಕನ್ನಡದಿಂದ ಉಡುಪಿ ಮೂಲಕ ಮಂಗಳೂರಿಗೆ ತೆರಳಿ ಅಲ್ಲಿಂದ ಮೃತದೇಹ ಕೇರಳಕ್ಕೆ ರವಾನೆ ಮಾಡಲಾಯಿತು. ಇದೇ ವೇಳೆ ಮೃತದೇಹ ಕೊಂಡೊಯ್ಯುವಾಗ ಉತ್ತರ ಕನ್ನಡ ಜಿಲ್ಲಾಡಳಿತದ ನಿರ್ಲಕ್ಷ್ಯ ಮಾಡಿತೇ ಎಂಬ ಪ್ರಶ್ನೆ ಎದುರಾಗಿದೆ. ಮೃತದೇಹ ರವಾನೆಗೆ ಉತ್ತರಕನ್ನಡ ಜಿಲ್ಲಾಡಳಿತ ಸೂಕ್ತ ಶವಪೆಟ್ಟಿಗೆಯನ್ನೇ ವ್ಯವಸ್ಥೆ ಮಾಡಿರಲಿಲ್ಲ! ಮೃತದೇಹವನ್ನು ಹಾಗೆಯೇ ಬಟ್ಟೆಯಲ್ಲಿ ಬಿಡಿ ಬಿಡಿಯಾಗಿ ಕಟ್ಟಿ ತರಲಾಗಿತ್ತು. ಉಡುಪಿಯಲ್ಲಿ ಇದನ್ನು ಗಮನಿಸಿದ ಸಮಾಜ ಸೇವಕರು ಸೂಕ್ತ ವ್ಯವಸ್ಥೆ ಕಲ್ಪಿಸಿದರು.ಈಶ್ವರ್ ಮಲ್ಪೆ ಮತ್ತು ನಿತ್ಯಾನಂದ ಒಳಕಾಡು ಅವರು ಮೃತದೇಹ ರವಾನೆಗೆ ಸೂಕ್ತ ವ್ಯವಸ್ಥೆ ಕಲ್ಪಿಸಿದ ಬಳಿಕ ಅರ್ಜುನ್ ಮೃತದೇಹವನ್ನು ಕೇರಳಕ್ಕೆ ಕೊಂಡೊಯ್ಯಲಾಯಿತು.
