

ಕಾರ್ಕಳ: ಪ್ರಿಯಕರನ ಜೊತೆ ಸೇರಿ ಪತ್ನಿಯೇ ತನ್ನ ಪತಿಗೆ ವಿಷ ಉಣಿಸಿ, ಬಳಿಕ ಉಸಿರುಗಟ್ಟಿಸಿ ಕೊಲೆಗೈದ ಪ್ರಕರಣಕ್ಕೆ ಸಂಬಂಧಿಸಿ ಪೊಲೀಸರು ತನಿಖೆ ಮುಂದುವರೆಸಿದ್ದಾರೆ. ಅಜೆಕಾರು ನಿವಾಸಿ ಸಂಜೀವ ಪೂಜಾರಿ ಎಂಬವರ ಮಗ ಬಾಲಕೃಷ್ಣ ಪೂಜಾರಿ(44) ಅವರನ್ನು ಅವರ ಪತ್ನಿ ಪ್ರತಿಮಾ(36) ತನ್ನ ಪ್ರಿಯಕರ ದಿಲೀಪ್ ಹೆಗ್ಡೆ ಜೊತೆ ಸೇರಿ ಅಕ್ಟೋಬರ್ 20ರಂದು ಅವರ ಮನೆಯಲ್ಲಿಯೇ ಕೊಲೆ ಮಾಡಿದ್ದರು.
ಈ ಬಗ್ಗೆ ಸಂಜೀವ ಪೂಜಾರಿ ನೀಡಿದ ದೂರಿನ ಹಿನ್ನೆಲೆಯಲ್ಲಿ ಅದೇ ದಿನ ಮಣಿಪಾಲ ಆಸ್ಪತ್ರೆಯಲ್ಲಿ ಮೃತದೇಹದ ಮರಣೋತ್ತರ ಪರೀಕ್ಷೆ ನಡೆಸಲಾಗಿದೆ. ಸಾವಿಗೆ ಕಾರಣದ ಕುರಿತ ವರದಿ ಇನ್ನಷ್ಟೆ ಬರಬೇಕಾಗಿದೆ.
ವಿಷ ಪ್ರಾಶನ ಕುರಿತು ವರದಿಗಾಗಿ ದೇಹದಲ್ಲಿನ ಮಾದರಿಯನ್ನು ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಿಕೊಡಲಾಗಿದೆ. ಮೂರು ದಿನಗಳ ಪೊಲೀಸ್ ಕಸ್ಟಡಿಗೆ ಪಡೆದುಕೊಂಡಿರುವ ದಿಲೀಪ್ ಹೆಗ್ಡೆಯನ್ನು ಪೊಲೀಸರು ಮಹಜರು ನಡೆಸಿದ್ದು, ಆತ ವಿಷ ಖರೀದಿಸಿದ ಉಡುಪಿ ಸಮೀಪದ ಒಳಕಾಡುವಿನಲ್ಲಿರುವ ಕೆಮಿಕಲ್ ಅಂಗಡಿಗೆ ಕರೆ ತಂದು ಮಹಜರು ನಡೆಸಲಾಯಿತು. ಅಲ್ಲದೆ ಆತನಿಂದ ಕೃತ್ಯಕ್ಕೆ ಬಳಸಿದ ಕಾರು, ಸ್ಕೂಟರ್, ಮೊಬೈಲ್ ಮತ್ತು ಸಿಮ್ ಕಾರ್ಡ್‌ಗಳನ್ನು ಪೊಲೀಸರು ವಪಡಿಸಿಕೊಂಡಿದ್ದಾರೆ.