ಕುಂದಾಪುರ: ನಾಳೆ ಆಗಸ್ಟ್ 25ರಂದು ಬೆಳಿಗ್ಗೆ 10 ಗಂಟೆಗೆ ಕುಂದಾಪುರದಲ್ಲಿ ಸೌಜನ್ಯ ಪರವಾಗಿ ನ್ಯಾಯಕ್ಕಾಗಿ ಜನಾಗ್ರಹ “ಬೃಹತ್ ಕಾಲ್ನಡಿಗೆ ಜಾಥಾ ಹಾಗೂ ಪ್ರತಿಭಟನಾ ಸಭೆ” ಗೆ ಅಂತಿಮ ರೂಪುರೇಷೆ ಸಿದ್ಧಗೊಂಡಿವೆ. ನಾಳೆ ಬೆಳಿಗ್ಗೆ 10 ಗಂಟೆಗೆ ಸರಿಯಾಗಿ ನೆಹರೂ ಮೈದಾನದಿಂದ ಮೆರವಣಿಗೆ ಆರಂಭಗೊಳ್ಳಲಿದೆ. ಕುಂದಾಪುರದ ಮುಖ್ಯರಸ್ತೆಯಲ್ಲಿ ಸಾಗಿ ಬರುವ ಈ ಮೆರವಣಿಗೆ ಹೊಸ ಬಸ್ ನಿಲ್ದಾಣದ ವರೆಗೆ ಸಾಗಿ ವಾಪಸ್ ಬಂದು ಕುಂದಾಪುರದ ಶಾಸ್ತ್ರೀ ವೃತ್ತದ ಸಮೀಪ ಈಗಾಗಲೇ ಸಿದ್ಧಗೊಂಡಿರುವ ವೇದಿಕೆ ಬಳಿ ಸಮಾವೇಶಗೊಳ್ಳಲಿದೆ. ಬಳಿಕ ಬೃಹತ್ ಪ್ರತಿಭಟನಾ ಸಭೆ ನಡೆಯಲಿದೆ ಎಂದು ಕಾರ್ಯಕ್ರಮ ಆಯೋಜಕರಾದ ಸುಧೀರ್ ಮಲ್ಯಾಡಿ ಹೇಳಿದ್ದಾರೆ. ಬೈಂದೂರು ಕಡೆಯಿಂದ ಬರುವ ಸಾರ್ವಜನಿಕರಿಗೆ ವಾಹನ ನಿಲ್ಲಿಸಲು ಆರ್.ಎನ್.ಶೆಟ್ಟಿ ಸಭಾಭವನದ ಪಾರ್ಕಿಂಗ್ ಏರಿಯಾದಲ್ಲಿ ವ್ಯವಸ್ಥೆ ಮಾಡಲಾಗಿದ್ದು, ನೆಹರೂ ಮೈದಾನದಿಂದ ಬರುವ ಮೆರವಣಿಗೆಯಲ್ಲಿ ಸೇರಿ ಕೊಳ್ಳಬೇಕು. ಇನ್ನು ಬ್ರಹ್ಮಾವರ, ಕೊಕ್ಕರ್ಣೆ ಕಡೆಯಿಂದ ಬರುವವರು ತಮ್ಮ ವಾಹನಗಳನ್ನು ನೆಹರೂ ಮೈದಾನದಲ್ಲಿ ವಾಹನ ಪಾರ್ಕಿಂಗ್ ವ್ಯವಸ್ಥೆ ಕಲ್ಪಿಸಲಾಗಿದೆ. ದಯವಿಟ್ಟು ಸತ್ಯ ಹಾಗೂ ನ್ಯಾಯದ ಪರವಾದ ಈ ಹೋರಾಟದಲ್ಲಿ ಕಾನೂನು ಉಲ್ಲಂಘಿಸಬಾರದು ಎಂದು ಅವರು ಹೇಳಿದ್ದಾರೆ. ಪಬ್ಲಿಕ್ ನೆಕ್ಸ್ಟ್ ಜೊತೆಗೆ ಮಾತನಾಡಿದ ಅವರು, ನಾಳೆ ಮಹೇಶ್ ಶೆಟ್ಟಿ ತಿಮರೋಡಿ ಹಾಗೂ ಸೌಜನ್ಯ ಕುಟುಂಬಸ್ಥರು ಭಾಗವಹಿಸಲಿದ್ದಾರೆ. ನಮ್ಮ ಹೋರಾಟ ಯಾವುದೇ ವ್ಯಕ್ತಿ ಅಥವಾ ಸಮಾಜದ ವಿರುದ್ಧ ಅಲ್ಲ. ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರುವ ಯಾವುದೇ ಉದ್ದೇಶ ನಾವು ಹೊಂದಿಲ್ಲ. ಕ್ರೂರವಾಗಿ ಅತ್ಯಾಚಾರವಾಗಿ ಕೊಲೆಯಾದ, ಸೌಜನ್ಯಗೆ ನ್ಯಾಯ ಸಿಗಬೇಕಿದೆ. ಅದಕ್ಕಾಗಿ ರಾಜ್ಯ ಸರ್ಕಾರದ ಕಣ್ಣು ತೆರೆಸುವುದು ಹಾಗೂ ಸೌಜನ್ಯಳಿಗೆ ನ್ಯಾಯ ದೊರಕಿಸಿ ಕೊಡುವಲ್ಲಿ ನಾಳೆಯ ಹೋರಾಟ ಹೊಸ ಮೈಲಿಗಲ್ಲಾಗಬೇಕು. ಆ ನಿಟ್ಟಿನಲ್ಲಿ ಎಲ್ಲರೂ ಭಾಗವಹಿಸಬೇಕು ಎಂದು ವಿನಂತಿಸಿದರು.