
ಉಡುಪಿ: ಆಸ್ತಿ ತೆರಿಗೆ ಹಣ ದುರ್ಬಳಕೆ ಮಾಡಿ ಸರ್ಕಾರಕ್ಕೆ ವಂಚನೆ ಮಾಡಿದ ಪ್ರಕರಣದಲ್ಲಿ ಇಬ್ಬರನ್ನು ಉಡುಪಿ ನಗರ ಪೊಲೀಸರು ಬಂಧಿಸಿದ್ದಾರೆ.
ದಿನಾಂಕ 16/02/2026 ರಂದು ಆನಂದ ಸುವರ್ಣ ಅವರು ಉಡುಪಿ ನಗರಸಭೆಗೆ ತೆರಳಿ, ಕಲ್ಮಾಡಿಯಲ್ಲಿರುವ ಕಟ್ಟಡ ನಂ. 17-5ಕ್ಕೆ ಸಂಬಂಧಿಸಿದಂತೆ 12 ವರ್ಷಗಳ ಆಸ್ತಿ ತೆರಿಗೆ ಮೊತ್ತ ರೂ.34,730ನ್ನು ಕಚೇರಿಯ ಹೊರಗಡೆ ಕೆಲಸ ಮಾಡುತ್ತಿದ್ದ ಶಾಲಿನಿ ಅವರಿಗೆ ನೀಡಿದ್ದರು. ಸಂಬಂಧಿಸಿದಂತೆ ಶಾಲಿನಿ ಅವರು 16/10/2025 ದಿನಾಂಕದ ಸ್ವೀಕೃತಿಯನ್ನು ನೀಡಿದ್ದರು.
ಆದರೆ ನಗರಸಭೆ ವೆಬ್‌ಸೈಟ್‌ನಲ್ಲಿ ಆಸ್ತಿ ತೆರಿಗೆ ಪಾವತಿ ಸ್ಥಿತಿಯನ್ನು ಪರಿಶೀಲಿಸಿದಾಗ ಮೊತ್ತ ಪೆಂಡಿಂಗ್‌ನಲ್ಲಿರುವುದು ಪತ್ತೆಯಾಯಿತು. ಈ ಬಗ್ಗೆ ವಿಚಾರಿಸಿದಾಗ, ಶಾಲಿನಿ ಅವರು ಹಣ ಸ್ವೀಕರಿಸಿರುವುದನ್ನು ಒಪ್ಪಿಕೊಂಡಿದ್ದು, ನಂತರ 16/02/2026 ರಂದು ಆನಂದ ಸುವರ್ಣ ಅವರ ಹೆಸರಿನಲ್ಲಿ ಹೊಸ ಚಲನ್ ಜನರೇಟ್ ಮಾಡಿ ರೂ.35,213ನ್ನು ಭರಿಸಿದ್ದಾರೆ.
ಆರೋಪದಂತೆ, ಶಾಲಿನಿ ಅವರು ಪಡೆದ ತೆರಿಗೆ ಹಣವನ್ನು ಸರ್ಕಾರಕ್ಕೆ ಕಟ್ಟದೆ, ಚಲನ್‌ನಲ್ಲಿ ಯೂನಿಯನ್ ಬ್ಯಾಂಕ್ ಮೊಹರು ಹಾಕಿ ಹಣ ದುರ್ಬಳಕೆ ಮಾಡಿ ಇತರರೊಂದಿಗೆ ಸೇರಿ ಸರ್ಕಾರಕ್ಕೆ ವಂಚನೆ ಮಾಡಿರುವುದಾಗಿ ನಗರಸಭೆ ನೀಡಿದ ದೂರಿನ ಮೇರೆಗೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 28/2026 ಅಡಿಯಲ್ಲಿ ಕಲಂ 336(2), 336(3), 340(2), 318(4) r/w 3(5) BNS ಪ್ರಕಾರ ಪ್ರಕರಣ ದಾಖಲಾಗಿದೆ.
ಪ್ರಕರಣದ ತನಿಖೆಯನ್ನು ಉಡುಪಿ ಉಪವಿಭಾಗದ ಡಿವೈಎಸ್‌ಪಿ ಬೆಳ್ಳಿಯಪ್ಪ ಅವರ ಮಾರ್ಗದರ್ಶನದಲ್ಲಿ, ಉಡುಪಿ ನಗರ ಪೊಲೀಸ್ ಠಾಣೆಯ ಪ್ರಭಾರ ಪೊಲೀಸ್ ನಿರೀಕ್ಷಕ ಮಹೇಶ ಪ್ರಸಾದ್ ಪಿ. ಅವರ ನೇತೃತ್ವದಲ್ಲಿ ಪಿಎಸ್‌ಐ ಗೋಪಾಲಕೃಷ್ಣ ಜೋಗಿ ಹಾಗೂ ಸಿಬ್ಬಂದಿಗಳಾದ ಸುರೇಂದ್ರ, ಅಬ್ದುಲ್ ಬಶೀರ, ಹೇಮಂತ, ಸವಿತಾ, ಪವಿತ್ರ ಮತ್ತು ಸ್ಪೂರ್ತಿ ಅವರ ತಂಡ ನಡೆಸಿ, ಪ್ರಕರಣದ ಆರೋಪಿಗಳಾದ ಬಿ. ಶಾಲಿನಿ (56), ಮಲ್ಪೆ ರೋಡ್, ಬನ್ನಂಜೆ, ಮೂಡನಿಡಂಬೂರು ಗ್ರಾಮ ಹಾಗೂ ಗಣೇಶ್ (24), ಸಚ್ಚಿದಾನಂದ ಲೇಔಟ್, ಕುಕ್ಕಿಕಟ್ಟೆ ಇವರನ್ನು 20-02-2026ರಂದು ವಶಕ್ಕೆ ಪಡೆದು ಬಂಧಿಸಿ ಮಾನ್ಯ ಉಡುಪಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.
