

ಉಡುಪಿ: ಒಂಭತ್ತು ತಿಂಗಳ ಹಿಂದೆ ಕಳವು ಪ್ರಕರಣ ನಡೆದ ಉಡುಪಿ ನಗರದ ಮಿಷನ್ ಕಾಂಪೌಂಡ್ ಬಳಿಯ ಸರಕಾರಿ ವಸತಿ ಸಮುಚ್ಛಯದಲ್ಲಿ ಮತ್ತೆ ಕಳ್ಳತನ ನಡೆದಿರುವುದು ವರದಿಯಾಗಿದೆ.
ಜು.19ರಂದು ರಾತ್ರಿ ವೇಳೆ ಉಡುಪಿ ನಗರ ಠಾಣೆಯ ಸಮೀಪದಲ್ಲೇ ಇರುವ ಕಂದಾಯ ಇಲಾಖೆಗೆ ಸಂಬಂಧಿಸಿದ ವಸತಿ ಸಮುಚ್ಛಯದ ಮೂರು ಮನೆಗಳಿಗೆ ನುಗ್ಗಿದ ಕಳ್ಳರು ಅಪಾರ ವೌಲ್ಯದ ಸೊತ್ತುಗಳನ್ನು ಕಳವು ಮಾಡಿದ್ದಾರೆ ಎಂದು ತಿಳಿದುಬಂದಿದೆ. ಕಳೆದ ವರ್ಷದ ಸೆ.29ರಂದು ಇಲ್ಲಿನ ಆರು ಮನೆಗಳಿಗೆ ಕಳ್ಳರು ನುಗ್ಗಿ ಲಕ್ಷಾಂತರ ರೂ. ವೌಲ್ಯದ ನಗ ನಗದು ಕಳವು ಮಾಡಿ ಪರಾರಿಯಾಗಿದ್ದರು. ಇದೀಗ ಮತ್ತೆ ಇಲ್ಲಿ ಕಳ್ಳತನ ನಡೆದಿರುವುದು ಸ್ಥಳೀಯರನ್ನು ಆತಂಕಕ್ಕೀಡು ಮಾಡಿದೆ.
ಸ್ಥಳಕ್ಕೆ ಆಗಮಿಸಿರುವ ಪೊಲೀಸರು ಪರಿಶೀಲನೆ ನಡೆಸಿದ್ದು, ಆರೋಪಿಗಳ ಬಂಧನಕ್ಕೆ ಬಲೆ ಬೀಸಿದ್ದಾರೆ. ಕಳ್ಳರು ಆಗಮಿಸುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಲಾಗಿದ್ದು, ಅದರ ಆಧಾರದಲ್ಲಿ ಆರೋಪಿಗಳಿಗೆ ಶೋಧ ಕಾರ್ಯ ಮುಂದುವರೆಸಿದ್ದಾರೆ