

ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರ ಎಸಗಿದ ಪ್ರಕರಣದಲ್ಲಿ ಆರೋಪಿಯನ್ನು ದೋಷಿ ಎಂದು ಸತ್ರ ನ್ಯಾಯಧೀಶ ಶ್ರೀನಿವಾಸ್ ಸುವರ್ಣ ಅವರು ಆದೇಶಿಸಿದ್ದಾರೆ.
ಒಟ್ಟು 39 ಸಾಕ್ಷಿಗಳ ಪೈಕಿ ಸಂತ್ರಸ್ತ ಬಾಲಕಿ ಸಹಿತ 16 ಸಾಂದರ್ಭಿಕ ಸಾಕ್ಷಿಗಳ ವಿಚಾರಣೆ ನಡೆಸಿ ಆರೋಪಿಯನ್ನು ತಪ್ಪಿತಸ್ಥ ಎಂದು ನ್ಯಾಯಧೀಶ ಶ್ರೀನಿವಾಸ್ ಸುವರ್ಣ ತೀರ್ಮಾನಿಸಿದರು. ಅದರಂತೆ ಆರೋಪಿಗೆ 20 ವರ್ಷಗಳ ಕಠಿಣ ಕಾರಗೃಹ ಶಿಕ್ಷೆ ಹಾಗು 25 ಸಾವಿರ ರೂ. ದಂಡ ವಿಧಿಸಿದ್ದು, ನೊಂದ ಬಾಲಕಿಗೆ ಸರಕಾರದಿಂದ 1.50 ಲಕ್ಷ ಪರಿಹಾರ ನೀಡುವಂತೆ ಆದೇಶಿಸಿದೆ.
ಶಿಕ್ಷೆಗೆ ಗುರಿಯಾದ ಆರೋಪಿಯನ್ನು ಬಾಗಲಕೋಟೆ ಜಿಲ್ಲೆಯ ಮಂಜುನಾಥ್ ಎಂದು ಗುರತಿಸಲಾಗಿದೆ. ಸಂತ್ರಸ್ತ ಬಾಲಕಿಯು ಕಾಪು ತಾಲೂಕಿನವಳಾಗಿದ್ದಾಳೆ. ಆರೋಪಿಯು ಬಾಲಕಿಯ ಅಣ್ಣನ ಸ್ನೇಹಿತ. ಬಾಲಕಿಯನ್ನು ಫೋನಲ್ಲಿ ಸಂಪರ್ಕಿಸಿದ ಆರೋಪಿಸಿ ಪ್ರೀತಿಸುತ್ತೇನೆ ಎಂದು ನಂಬಿಸಿದ್ದನು. ನಂತರ ತಮ್ಮ ಪ್ರೀತಿಯ ಬಗ್ಗೆ ಅಣ್ಣನಿಗೆ ತಿಳಿಸುವುದಾಗಿ ಬೆದರಿಸುತ್ತಿದ್ದನಂತೆ. ಸಂತ್ರಸ್ತ ತನ್ನ ಅಜ್ಜಿ ಮನೆಯಾದ ಗದಗ ಜಿಲ್ಲೆಯ ರೋಣ ತಾಲೂಕಿಗೆ ತೆರಳಿದ್ದಾಗ, ಆರೋಪಿ ಬಲವಂತದಿಂದ ನಿರ್ಜನ ಪ್ರದೇಶಕ್ಕೆ ಬಾಲಕಿಯನ್ನು ಕರೆದುಕೊಂಡು ಹೋಗಿ, ದೈಹಿಕ ಸಂಪರ್ಕ ಬೆಳೆಸಿ ವಿಡಿಯೊ ಮಾಡಿದ್ದನು. ಈ ವಿಚಾರ ಯಾರಿಗಾದರೂ ಹೇಳಿದ್ದಲ್ಲಿ, ತಾನು ಮಾಡಿರುವ ವಿಡಿಯೊವನ್ನು ಅಣ್ಣ ಹಾಗೂ ಮನೆಯವರಿಗೆ ಕಳುಹಿಸುವುದಾಗಿ ಬೆದರಿಸಿದನು. ಈ ಕುರಿತು ಠಾಣೆಯಲ್ಲಿ ದಾಖಲಾಗಿತ್ತು.