ಉಡುಪಿ: ಉಡುಪಿಯಲ್ಲಿ ಮತ್ತೆ ನಾಲ್ವರಿಗೆ ಕಾಲರಾ- ಒಟ್ಟು 15 ಪ್ರಕರಣ ಪತ್ತೆ

ಉಡುಪಿ: ಜಿಲ್ಲೆಯಲ್ಲಿ ಮಾರಕ ಕಾಲರಾದ 15 ಪ್ರಕರಣಗಳು ಇದುವರೆಗೆ ವರದಿಯಾಗಿವೆ. 2015ರಲ್ಲಿ ಎಂಟು ಪ್ರಕರಣಗಳು ವರದಿಯಾಗಿ ಇಬ್ಬರು ಮೃತಪಟ್ಟ ಬಳಿ ಜಿಲ್ಲೆಯಲ್ಲಿ ಇಷ್ಟೊಂದು ದೊಡ್ಡ ಪ್ರಮಾಣದಲ್ಲಿ ಪ್ರಕರಣ ವರದಿಯಾಗಿರಲಿಲ್ಲ ಎಂದು ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ನಾಗರತ್ನ ತಿಳಿಸಿದ್ದಾರೆ. 2019 ಹಾಗೂ 2021ರಲ್ಲಿ ಒಂದೆರಡು ಪ್ರಕರಣಗಳು ವರದಿಯಾಗಿದ್ದರೂ, ಶೀಘ್ರದಲ್ಲೇ ಅದನ್ನು ನಿಯಂತ್ರಣಕ್ಕೆ ತರಲಾಗಿತ್ತು. ಆದರೆ ಈ ಬಾರಿ ಮಲ್ಪೆ ಬಂದರಿನ ಮೂಲಕ ಕಾಲರಾ ಬ್ಯಾಕ್ಟಿರಿಯಾ ಹರಡಿರುವುದು ಸ್ಪಷ್ಟವಾಗಿದೆ ಎಂದವರು ತಿಳಿಸಿದರು. ಜಿಲ್ಲೆಯಲ್ಲಿ ಮೊದಲ ಕಾಲರಾ ಪ್ರಕರಣ ವರದಿಯಾಗಿದ್ದು ಕಾರ್ಕಳದ ಈದುವಿನಿಂದ. ಅಲ್ಲಿ ಒಟ್ಟು ಐವರಲ್ಲಿ ಇದು ಕಂಡು ಬಂದಿತ್ತು. ಮತ್ತೆ ಮಲ್ಪೆ ಆಸುಪಾಸಿನಲ್ಲಿ 4, ಕಾಪುವಿನಿಂದ 2, ಕೆಮ್ಮಣ್ಣು ಶಿರ್ವ ಹಾಗೂ ಬೀಜಾಡಿಯಿಂದ ಉಳಿದ ಕೇಸು ಗಳು ವರದಿಯಾಗಿವೆ ಎಂದು ಡಾ.ನಾಗರತ್ನ ತಿಳಿಸಿದರು. ಈ ಬಾರಿ ಕಾಲರಾ ಮೊದಲು ವರದಿಯಾಗಿದ್ದು ಗೋವಾದಲ್ಲಿ. ಮಳೆಗಾಲವಾದ್ದರಿಂದ ಮೀನುಗಾರಿಕೆಗೆ ರಜೆ ಇದ್ದದ್ದರಿಂದ ಅದು ಹೆಚ್ಚು ವಿಸ್ತರಿಸಿರಲಿಲ್ಲ. ನಂತರ ಅದು ಕಂಡುಬಂದಿದ್ದು ಕಾರವಾರ ಬಂದರಿನಲ್ಲಿ. ಕಾರವಾರದಿಂದ ಕಳೆದ ಆಗಸ್ಟ್‌ನಲ್ಲಿ ಉಡುಪಿಗೆ ಪರೀಕ್ಷೆಗಾಗಿ ಕಳುಹಿಸಿದ ಸ್ಯಾಂಪಲ್‌ನಲ್ಲಿ ಇದು ಪತ್ತೆಯಾಗಿತ್ತು. ಉಡುಪಿಯಲ್ಲೂ ಕಾಲರಾದ ಮೂಲವನ್ನು ಹುಡುಕಿದಾಗ ಒಂದು ಬಾರ್‌ಗೆ ಹೋದ ಐವರಲ್ಲಿ ಇದು ಪತ್ತೆಯಾಗಿತ್ತು. ಬಂದರಿನಿಂದ ಬಂದ ಮೀನು ಅಥವಾ ಮೀನನ್ನು ತಂದವರ ಮೂಲಕ ಇದು ಹರಡಿರುವ ಸಾಧ್ಯತೆ ಕಂಡುಬಂದಿತ್ತು ಎಂದರು.ಈ ಹಿನ್ನೆಲೆಯಲ್ಲಿ ಕಾಲರಾ ಬಾರದಂತೆ ತಡೆಯಲು ವೈಯಕ್ತಿಕವಾಗಿ ಸ್ವಚ್ಛತೆಗೆ ಆದ್ಯತೆ ನೀಡಬೇಕು. ಶೌಚಕ್ಕೆ ಹೋಗಿ ಬಂದಾಗ ಕೈಕಾಲುಗಳನ್ನು ಚೆನ್ನಾಗಿ ತೊಳೆಯಬೇಕು. ಹೊರಗೆ ಹೋಗಿ ಬಂದಾಗಲೂ ಅದನ್ನು ಅನುಸರಿಸಬೇಕು. ಹೊರಗಿನಿಂದ ತಂದ ಹಣ್ಣು ತರಕಾರಿ, ಮೀನು, ಮಾಂಸಗಳನ್ನು ಸ್ವಚ್ಛಗೊಳಿಸಿ ಇಪಯೋಗಿಸಬೇಕು ಎಂದು ಅವರು ಮನವಿ ಮಾಡಿದ್ದಾರೆ.

Check Also

ಉಡುಪಿ: ಸುಡುಮದ್ದು ಮಾರಾಟ- ತಾತ್ಕಾಲಿಕ ಪರವಾನಿಗೆಗೆ ಅರ್ಜಿ ಆಹ್ವಾನ

ಉಡುಪಿ: ದೀಪಾವಳಿ ಸಂದರ್ಭದಲ್ಲಿ (ಅಕ್ಟೋಬರ್ 30 ರಿಂದ ನವೆಂಬರ್ 2ರ ವರೆಗೆ ಮಾತ್ರ) ಜಿಲ್ಲಾ ವ್ಯಾಪ್ತಿಯಲ್ಲಿ ತಾತ್ಕಾಲಿಕ ಸುಡುಮದ್ದು ಮಾರಾಟ …

Leave a Reply

Your email address will not be published. Required fields are marked *

You cannot copy content of this page.