
ಕಾರ್ಕಳದ ಯುವಕ ಅಭಿಷೇಕ್ ಆಚಾರ್ಯ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ತಾಂತ್ರಿಕ ಸಾಕ್ಷ್ಯಗಳನ್ನು ಸಂಗ್ರಹಿಸಿ ತನಿಖೆ ನಡೆಸಲಾಗುತ್ತಿದೆ ಎಂದು ಉಡುಪಿ ಜಿಲ್ಲಾ ಎಸ್ಪಿ ಹರಿರಾಮ್ ಶಂಕರ್ ಹೇಳಿದ್ದಾರೆ.
ಹನಿ ಟ್ರ್ಯಾಪ್ ಗೆ ಒಳಗಾಗಿ ಡೆತ್ ನೋಟ್ ಬರೆದಿಟ್ಟು ಅಭಿಷೇಕ್ ಆಚಾರ್ಯ ಆತ್ಮಹತ್ಯೆ ಮಾಡಿಕೊಂಡಿದ್ದು, ಆರೋಪಿಗಳನ್ನು ಪೊಲೀಸರು ಬಂಧಿಸಿಲ್ಲ ಎನ್ನುವ ಆರೋಪಗಳು ಕೇಳಿ ಬಂದಿದ್ದವು. ಇದಕ್ಕೆ ಪ್ರತಿಕ್ರಿಯೆ ನೀಡಿರುವ ಎಸ್ಪಿ ಹರಿರಾಮ್ ಶಂಕರ್, ಡೆತ್ ನೋಟ್ ನಲ್ಲಿ ಉಲ್ಲೇಖಸಿರುವ ಎಲ್ಲಾ ವಿಷಯಗಳ ಬಗ್ಗೆ ತನಿಖೆ ನಡೆಸುವ ಅವಶ್ಯಕತೆ ಇದೆ.
ಆರಂಭಿಕವಾಗಿ ಇದು ಪ್ರೀತಿ ವೈಫಲ್ಯದ ಪ್ರಕರಣವೆಂದು ಕಂಡುಬಂದರೂ, ಸೂಸೈಡ್ ನೋಟ್‌ನಲ್ಲಿರುವ ವಿಷಯಗಳ ಬಗ್ಗೆ ಸಂಪೂರ್ಣ ತನಿಖೆ ನಡೆಸುವ ಅಗತ್ಯವಿದೆ ಎಂದು ತಿಳಿಸಿದ್ದಾರೆ. ತಾಂತ್ರಿಕ ಸಾಕ್ಷ್ಯಗಳನ್ನು ಸಂಗ್ರಹಿಸಿ, ಆತ್ಮಹತ್ಯೆಯ ಹಿಂದಿರುವ ನೈಜತೆಯನ್ನು ಪತ್ತೆಹಚ್ಚುವತ್ತ ಗಮನಹರಿಸಲಾಗಿದೆ.
ಈಗಲೇ ಯಾವುದೇ ತೀರ್ಮಾನಕ್ಕೆ ಬರುವುದಿಲ್ಲ, ಆತ್ಮಹತ್ಯೆಗೆ ಪ್ರಚೋದನೆ ನೀಡಿದವರು ಯಾರೇ ಇದ್ದರೂ ಅವರ ವಿರುದ್ಧ ಕಾನೂನು ಕ್ರಮ ಜರುಗಿಸಲಾಗುವುದು. ತನಿಖೆ ಪಾರದರ್ಶಕವಾಗಿ ನಡೆಯಲಿದೆ ಎಂದು ತಿಳಿಸಿದ್ದಾರೆ. ಪೊಲೀಸರು ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಆರೋಪದಡಿ ನಾಲ್ವರು ಆರೋಪಿಗಳ ವಿರುದ್ಧ ಎಫ್‌ಐಆರ್ ದಾಖಲಿಸಿದ್ದಾರೆ.
ನಾಲ್ವರ ಪೈಕಿ ಈಗಾಗಲೇ ಮೂವರನ್ನು ಗುರುತಿಸಲಾಗಿದೆ. ಅವರ ಫೋನ್ ವಶಪಡಿಸಿಕೊಂಡು ವಿಡಿಯೋಗಳನ್ನು ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ರವಾನಿಸಲಾಗಿದೆ ಎಂದು ತಿಳಿಸಿದರು.
