

ಕಾರ್ಕಳ: ವ್ಯಾಲೆಂಟೈನ್ಸ್ ಡೇ ಗಿಫ್ಟ್ ಆಸೆಗೆ ಬಿದ್ದು ವ್ಯಕ್ತಿಯೊಬ್ಬರು ಲಕ್ಷಾಂತರ ರೂಪಾಯಿ ಕಳೆದುಕೊಂಡ ಘಟನೆ ಕಾರ್ಕಳದಲ್ಲಿ ನಡೆದಿದೆ. ಈ ಬಗ್ಗೆ ಉಡುಪಿ ಸೆನ್ ಅಪರಾಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕಾರ್ಕಳದ ವ್ಯಕ್ತಿಯೊಬ್ಬರಿಗೆ ಫೆಲಿಕ್ಸ್ ಡಯಸ್ ಎಂಬ ಹೆಸರಿನ ಫೇಸ್‌ಬುಕ್ ಖಾತೆದಾರ ಪರಿಚಯವಾಗಿದ್ದು, ಆಕೆ ತಾನು ಯೂರೋಪಿನ ಸ್ರೈಪ್ರಸ್ ಎಂಬಲ್ಲಿ ವಾಸವಾಗಿರುವುದಾಗಿ ನಂಬಿಸಿದ್ದಳು.
ವ್ಯಾಲೆಂಟೈನ್ಸ್ ಡೇಗೆ ಗಿಫ್ಟ್ ಪಾರ್ಸೆಲ್ ಕಳುಹಿಸುವುದಾಗಿ ತಿಳಿಸಿ ಅದರ ಫೋಟೋ ಹಾಗೂ ಮೆಸೇಜ್‌ಗಳನ್ನು ಆಕೆ ವಾಟ್ಸಾಪ್ ಮೂಲಕ ಕಳುಹಿಸಿದ್ದಳು. ಫೆ.13ರಂದು ದೆಹಲಿ ವಿಮಾನ ನಿಲ್ದಾಣದ ಸಿಬ್ಬಂದಿ ಎಂದು ಕರೆ ಮಾಡಿ ಪಾರ್ಸಲ್‌ನ ಗ್ರೌಂಡ್ ಪಾಸ್ ಮಾಡಲು ಹಣವನ್ನು ಡಿಪಾಸಿಟ್ ಮಾಡುವಂತೆ ತಿಳಿಸಿದರು. ಅದರಂತೆ ಅವರು, ಸಿಬ್ಬಂದಿ ಸೂಚಿಸಿದ ಬ್ಯಾಂಕ್ ಖಾತೆಗೆ ಹಣ ಡಿಪಾಸಿಟ್ ಮಾಡಿದರು. ನಂತರ ಬೇರೆ ಬೇರೆ ರೀತಿಯಾಗಿ ಹೇಳಿ ಹಣವನ್ನು ಡಿಪಾಸಿಟ್ ಮಾಡುವಂತೆ ತಿಳಿಸಿದ್ದರು. ಇದನ್ನು ನಂಬಿದ ಇವರು, ಫೆ.14ರಂದು ಒಟ್ಟು 7,63,500ರೂ. ಹಣವನ್ನು ಡಿಪಾಸಿಟ್ ಮಾಡಿ ಮೋಸ ಹೋಗಿರುವುದಾಗಿ ದೂರಿನಲ್ಲಿ ತಿಳಿಸಲಾಗಿದೆ.