October 18, 2024
WhatsApp Image 2024-10-14 at 11.17.34 AM

ಉಡುಪಿ: ಅನಿವಾಸಿ ಭಾರತೀಯ, ಕುಂದಾಪುರ  ತಾಲೂಕಿನ ವಕ್ವಾಡಿ ಮೂಲದ ಉದ್ಯಮಿ ಪ್ರವೀಣ್ ಕುಮಾರ್ ಶೆಟ್ಟಿಯವರು ಆಡಳಿತ ನಿರ್ದೇಶಕರಾಗಿರುವ ದುಬೈನ ಹೋಟೆಲೊಂದಕ್ಕೆ ಅಕೌಂಟೆಂಟ್ ಆಗಿ ಸೇರಿ  2.5 ಕೋಟಿಗೂ ಅಧಿಕ ಹಣ ವಂಚಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಜೆ.ಎಂ.ಎಫ್.ಸಿ ನ್ಯಾಯಾಲಯದಲ್ಲಿ ಜಾಮೀನು ಪಡೆದು ಬಳಿಕ ಜಿಲ್ಲಾ ಸೆಶನ್ಸ್ ನ್ಯಾಯಾಲಯ ಹಾಗೂ ರಾಜ್ಯ ಉಚ್ಚ ನ್ಯಾಯಾಲಯದಲ್ಲಿ ಜಾಮೀನು ರದ್ಧು ಆದೇಶವಾದ ಬೆನ್ನಲ್ಲೇ ತಲೆ ಮರೆಸಿಕೊಂಡಿದ್ದ ಆರೋಪಿಯನ್ನು ಉಡುಪಿ ಸೆನ್ ಠಾಣೆ ಪೊಲೀಸರು ಮೈಸೂರು ಜಿಲ್ಲೆ ನಂಜನಗೂಡು ಬಳಿ ಬಂಧಿಸಿದ್ದಾರೆ.

ಬಾರ್ಕೂರು‌ ಮೂಲದ ನಾಗೇಶ್ ಪೂಜಾರಿ (31) ಬಂಧಿತ ಆರೋಪಿ.

ಈತನನ್ನು ನ್ಯಾಯಾಧೀಶರ ಮುಂದೆ ಹಾಜರುಪಡಿಸಿದ್ದು ಹೆಚ್ಚಿನ ತನಿಖೆ ಹಿನ್ನೆಲೆ ಮೂರು ದಿನಗಳ ಕಾಲ (ಅ.16) ಪೊಲೀಸ್ ಕಸ್ಟಡಿಗೆ ನೀಡಿ ಆದೇಶ ನೀಡಿದ್ದಾರೆ.

ಘಟನೆ ಹಿನ್ನೆಲೆ: ದುಬೈನ ಫಾರ್ಚ್ಯೂನ್ ಗ್ರೂಫ್ ಆಫ್ ಹೋಟೆಲ್ಸ್ ಸಂಬಂಧಿತ ಹೋಟೆಲೊಂದಕ್ಕೆ ಉದ್ಯೋಗಕ್ಕೆ ಸೇರಿದ್ದ ನಾಗೇಶ್ ಪೂಜಾರಿಯು 2.5ಕೋಟಿಗೂ ಅಧಿಕ ಹಣ ವಂಚಿಸಿದ್ದು ಈ ಬಗ್ಗೆ ಫಾರ್ಚ್ಯೂನ್ ಹೋಟೆಲ್ ಮ್ಯಾನೇಜರ್ ಸುನೀಲ್ ಕುಮಾರ್ ನೀಡಿದ ದೂರಿನಂತೆ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. 25 ಲಕ್ಷಕ್ಕೂ ಹೆಚ್ಚಿನ ಹಣ ಅವ್ಯವಹಾರ ತನಿಖೆಯಾದ್ದರಿಂದ ಉಡುಪಿ ಸೆನ್ ಠಾಣೆಗೆ ಪ್ರಕರಣ ವರ್ಗಾವಣೆಗೊಂಡಿತ್ತು. ಆರೋಪಿ ನಾಗೇಶ್ ಪೂಜಾರಿ ಉಚ್ಚ ನ್ಯಾಯಾಲಯ (ಹೈಕೋರ್ಟ್)ದಲ್ಲಿ ಎಫ್.ಐ.ಆರ್. ಮೇಲಿನ ತನಿಖೆ ಸ್ಥಗಿತಗೊಳಿಸಲು ವಕೀಲರ ಮೂಲಕ ಅರ್ಜಿ ದಾಖಲಿಸಿದ್ದು 2023 ಜುಲೈನಲ್ಲಿ ಆ ಅರ್ಜಿ ವಜಾಗೊಳಿಸಲಾಗಿತ್ತು. ಬಳಿಕ ಆರೋಪಿ ಕುಂದಾಪುರದಲ್ಲಿರುವ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದಲ್ಲಿ ನಿರೀಕ್ಷಣಾ ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದು ಅದನ್ನು ನ್ಯಾಯಾಲಯ ತಿರಸ್ಕರಿಸಿತ್ತು. ಕರ್ನಾಟಕ ಉಚ್ಚನ್ಯಾಯಾಲಯದ ಮತ್ತು ಸೆಶನ್ಸ್ ನ್ಯಾಯಾಲಯದ ಆದೇಶಗಳನ್ನು ಮರೆಮಾಚಿ ಬ್ರಹ್ಮಾವರದ ಜೆ.ಎಂ.ಎಫ್.ಸಿ ನ್ಯಾಯಾಲಯದಲ್ಲಿ ಶರಣಾಗಿ 2023 ಆಗಸ್ಟ್ ತಿಂಗಳಿನಲ್ಲಿ ಆರೋಪಿ ಜಾಮೀನು ಪಡೆದುಕೊಂಡಿದ್ದ. ಈ ಜಾಮೀನು ಆದೇಶವನ್ನು ಸರಕಾರ ಪ್ರಶ್ನಿಸಿ ಪರಿಷ್ಕೃತ ಅರ್ಜಿಯನ್ನು ಜಿಲ್ಲಾ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿತ್ತು. ಪ್ರಕರಣದ ವಿಚಾರಣೆಯ‌ನ್ನು ಉಡುಪಿಯ 2ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದಲ್ಲಿ ಕೈಗೊಂಡಿದ್ದು, ಅಲ್ಲಿಯೂ ಜೆ.ಎಂ.ಎಫ್.ಸಿ ನ್ಯಾಯಾಲಯ ನೀಡಿದ ಜಾಮೀನು ರದ್ದುಗೊಳಿಸಿ ಆದೇಶ ನೀಡಲಾಗಿತ್ತು. ಈ ತೀರ್ಪಿನ ಬಳಿಕ ಆರೋಪಿ ತನ್ನ ಪರ ವಕೀಲರ ಮೂಲಕ ಹೈಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದ. ಇದರ ಅರ್ಜಿ ವಿಚಾರಣೆ ನಡೆಸಿದ ಉಚ್ಚನ್ಯಾಯಾಲಯದ ‌ನ್ಯಾಯಾಧೀಶರಾದ ನಾಗಪ್ರಸನ್ನ ಅವರು ಜೆ.ಎಂ.ಎಫ್.ಸಿ ನ್ಯಾಯಾಲಯದ ನೀಡಿದ ಜಾಮೀನು ರದ್ದುಗೊಳಿಸಿದ್ದರು. ಫಾರ್ಚೂನ್ ಗ್ರೂಫ್ ಪರ ಹೈಕೋರ್ಟ್ ನ್ಯಾಯವಾದಿ ಪ್ರಸನ್ನ ಶೆಟ್ಟಿ ಕೆರೆಬೆಟ್ಟು ವಾದಿಸಿದ್ದರು.

ಪ್ರಕರಣ ಬೆಳಕಿಗೆ ಬಂದಿದ್ದು ಹೇಗೆ?

ಕಳೆದ ಏಳೆಂಟು ವರ್ಷಗಳ ಹಿಂದೆ ಫಾರ್ಚ್ಯೂನ್ ಗ್ರೂಪ್ ಆಫ್ ಹೋಟೆಲ್ಸ್ ದುಬೈ ಮತ್ತು ಭಾರತದ ಆಡಳಿತ ನಿರ್ದೇಶಕ ವಿ. ಪ್ರವೀಣ್ ಕುಮಾರ್ ಶೆಟ್ಟಿಯವರು ಸಂದರ್ಶನ ನಡೆಸಿ ಅಲ್ಲಿನ ಹೋಟೆಲಿಗೆ ಅಕೌಂಟೆಂಟ್ ಆಗಿ ಉದ್ಯೋಗಕ್ಕೆ ಸೇರಿದ್ದ ನಾಗೇಶ್ ಪೂಜಾರಿಯು 2022 ಮುಖ್ಯ ಅಕೌಂಟೆಂಟ್ ಆಗಿ ಬಡ್ತಿಯಾಗಿದ್ದು 2023ರಲ್ಲಿ ತನ್ನ ಮದುವೆಯ ಹಿನ್ನೆಲೆ ದುಬೈನಿಂದ ಊರಿಗೆ 3 ತಿಂಗಳ ರಜೆಯಲ್ಲಿ ಊರಿಗೆ ಬಂದಿದ್ದ. ಪಡೆದ ರಜೆ ಮುಗಿಯುವ ಹೊತ್ತಿಗೆ ಇನ್ನು 15 ದಿನಗಳ ಹೆಚ್ಚುವರಿ ರಜೆಯನ್ನು ಕೋರಿದ್ದು ದುಬೈನಲ್ಲಿ ಕೆಲಸದ ಒತ್ತಡ ಹೆಚ್ಚಿದ್ದರಿಂದ ರಜೆ ನಿರಾಕರಿಸಲಾಗಿತ್ತು. ನಂತರ ಆರೋಪಿ ಇ-ಮೇಲ್ ಮುಖಾಂತರ ತನ್ನ ರಾಜೀನಾಮೆ ಪತ್ರವನ್ನು ಎಚ್.ಆರ್ ಗೆ ಕಳುಹಿಸಿದ್ದು ದಿಢೀರ್ ರಾಜೀನಾಮೆ, ಅಸಹಜ ವರ್ತನೆಯಿಂದ ಅನುಮಾನಗೊಂಡು ಆತ ಕೆಲಸ ಮಾಡಿಕೊಂಡಿದ್ದ ಹೋಟೆಲಿನ ಲೆಕ್ಕ ಪುಸ್ತಕಗಳನ್ನು ಹಾಗೂ ಕೆಲವು ನಗದು ವಹಿವಾಟುಗಳನ್ನು ಬ್ಯಾಂಕ್ ಸ್ಟೇಟ್ಮೆಂಟ್ ಜೊತೆ ಪರಿಶೀಲಿಸಿದಾಗ ಅಲ್ಲಿ ಆದಾಯ ಹೊರತಾಗಿಯೂ ದೊಡ್ಡ ಪ್ರಮಾಣದ ನಗದು ಕಾಣೆಯಾಗಿದ್ದು ತಿಳಿದುಬಂದಿತ್ತು. ಹೋಟೆಲಿನ ಆದಾಯದಲ್ಲಿ ಬಂದ ನಗದನ್ನು ಹೋಟೆಲ್‌ನ ಬ್ಯಾಂಕ್ ಖಾತೆಗೆ ಜಮೆ ಮಾಡದೆ ಭಾರತ ದೇಶದ ತನ್ನ ವೈಯುಕ್ತಿಕ ಬ್ಯಾಂಕ್ ಖಾತೆಗೆ ವರ್ಗಾವಣೆ ಮಾಡಿಕೊಂಡಿದ್ದಲ್ಲದೆ ಮ್ಯಾನೇಜ್ಮೆಂಟ್ ನಿಯಮಿತ ಹಸ್ತಕ್ಷೇಪವನ್ನು ತಪ್ಪಿಸಲು ನಗದು ವಹಿವಾಟುಗಳಿಗೆ ನಕಲಿ ಜರನಲ್ ನಮೂದುಗಳನ್ನು ಸೃಷ್ಟಿಸಿದ್ದು ಖಾತ್ರಿಯಾಗಿದ್ದು ಹಂತಹಂತವಾಗಿ ಆರೋಪಿ ಭಾರತದ ರೂಪಾಯಿಗಳಲ್ಲಿ 2 ಕೋಟಿ 55 ಲಕ್ಷದ 63 ಸಾವಿರ ಹಣ ವಂಚಿಸಿದ್ದು ಬೆಳಕಿಗೆ ಬಂದಿತ್ತು. ಕೋಟ್ಯಾಂತರ ರೂ. ವಂಚನೆ ಮಾಡಿದ ಪ್ರಕರಣದಲ್ಲಿ ಎರಡು ಬಾರಿ ಜಾಮೀನು ರದ್ದುಗೊಂಡಾಗಲೂ ಪೊಲೀಸರಿಗೆ ಸಿಗದ ಆರೋಪಿ ತಲೆಮರೆಸಿಕೊಂಡಿದ್ದ.

About The Author

Leave a Reply

Your email address will not be published. Required fields are marked *

You cannot copy content of this page.