ಉಡುಪಿ: ಕಟಪಾಡಿ ವಿಶ್ವನಾಥ ಕ್ಷೇತ್ರದ ಬಳಿಯ ಬಾಡಿಗೆ ಮನೆಯಿಂದ ನಾಪತ್ತೆಯಾಗಿದ್ದ ಸುನೀಲ್ ಕುಮಾರ್ (54) ಅವರ ಶವವು ಕೊಳೆತ ಸ್ಥಿತಿಯಲ್ಲಿ ಎಲ್ಲೂರು ಗ್ರಾ.ಪಂ. ವ್ಯಾಪ್ತಿಯ ಇರಂದಾಡಿಯ ಹಾಡಿಯಲ್ಲಿ ಪತ್ತೆಯಾಗಿದೆ.
ಪ್ರಾಣಿಗಳು ಎಳೆದಾಡಿದಂತೆ ಛಿದ್ರವಾಗಿದ್ದ ದೇಹ, ತಲೆಬುರುಡೆ ಮತ್ತು ಸೊಂಟದ ಭಾಗಗಳನ್ನು ಹೊಂದಿದ್ದ ಮೃತದೇಹವನ್ನು ಎಲ್ಲೂರು ಗ್ರಾ.ಪಂ. ಸದಸ್ಯ ಯಶವಂತ ಶೆಟ್ಟಿ ಅವರು ನೋಡಿದ್ದು ಅಪರಿಚಿತ ಮೃತದೇಹ ಪತ್ತೆಯಾಗಿರುವ ಕುರಿತು ಪಡುಬಿದ್ರಿ ಠಾಣೆಗೆ ನ. 10ರ ರಾತ್ರಿ ದೂರು ನೀಡಿದ್ದರು. ಸುನಿಲ್ ಮನೆಯವರು ಶವದ ಮೈಮೇಲಿದ್ದ ಬಟ್ಟೆಗಳ ಆಧಾರದಲ್ಲಿ ಅವರ ಗುರುತು ಪತ್ತೆಹಚ್ಚಿದ್ದಾರೆ.
ರಿಕ್ಷಾ ಚಾಲಕರಾಗಿದ್ದ ಸುನಿಲ್ ಬಳಿಕ ಪೀಠೊಪಕರಣಗಳ ಮಳಿಗೆಯಲ್ಲಿಯೂ ದುಡಿಯುತ್ತಿದ್ದರು. ವಿಪರೀತ ಮದ್ಯಪಾನದ ಚಟವಿದ್ದು ಸರಿಯಾಗಿ ಮನೆಗೂ ಬರುತ್ತಿರಲಿಲ್ಲ ಎನ್ನಲಾಗಿದೆ. ಮಾನಸಿಕ ಕಾಯಿಲೆಗೂ ಚಿಕಿತ್ಸೆ ನೀಡಲಾಗಿದ್ದರೂ ಪ್ರಯೋಜನವಾಗಿರಲಿಲ್ಲ ಎಂದು ತಿಳಿದುಬಂದಿದೆ. ಅವರು ಅಕ್ಟೋಬರ್ 23ರಂದು ಮನೆ ಬಿಟ್ಟಿದ್ದರು. ಕೆಲವು ಸಲ ಎರಡು-ಮೂರು ದಿನಗಳ ಬಳಿಕ ಮನೆಗೆ ಬರುತ್ತಿದ್ದ ಕಾರಣ ನ. 1ರಂದು ಕಾಪು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿತ್ತು. ಅವರು ಪತ್ನಿ ಹಾಗೂ ಮೂವರು ಮಕ್ಕಳನ್ನು ಅಗಲಿದ್ದಾರೆ.