ರಾಷ್ಟ್ರೀಯ ಸಂತ ಕವಿ ಕನಕದಾಸ ಅಧ್ಯಯನ ಮತ್ತು ಸಂಶೋಧನಾ ಕೇಂದ್ರದ ಸದಸ್ಯರನ್ನಾಗಿ ಉಡುಪಿಯ ಡಾ. ಕಾತ್ಯಾಯಿನಿ ಕುಂಜಿಬೆಟ್ಟು ಅವರನ್ನು ಸರ್ಕಾರವು ನೇಮಕ ಮಾಡಿ ಆದೇಶ ಹೊರಡಿಸಿದೆ.
ಡಾ. ಕಾತ್ಯಾಯಿನಿ ಕುಂಜಿಬೆಟ್ಟು ಅವರು ಸಾಹಿತ್ಯದ ಕಾವ್ಯ , ಕತೆ, ನಾಟಕ, ವಿಮರ್ಶೆ, ಅಂಕಣ ಬರಹ, ಅನುವಾದ, ಸಂಶೋಧನೆ ಮಂತಾದ ಪ್ರಕಾರಗಳಲ್ಲಿ ಈಗಾಗಲೇ ಸುಮಾರು 30ಕ್ಕೂ ಹೆಚ್ಚು ಕೃತಿಗಳನ್ನು ಪ್ರಕಟಿಸಿದ್ದಾರೆ. ಕಾಯಕಾವ್ಯ, ಅವನು ಹೆಣ್ಣಾಗಬೇಕು, ನಕ್ಷತ್ರ ನಕ್ಕ ರಾತ್ರಿ, ಮುಂತಾದ ಕವನ ಸಂಗ್ರಹಗಳು, ತೊಗಲು ಗೊಂಬೆ ಕಾದಂಬರಿ, ಇರವಿನ ಅರಿವು, ಮೊಗ್ಗಿನ ಮಾತು, ಮುಂತಾದವು ಇವರ ಕೆಲವು ಕೃತಿಗಳು.
ಕನಕದಾಸರ ಕೀರ್ತನೆಗಳನ್ನು ಮತ್ತು ವಚನಗಳನ್ನು ತುಳುವಿಗೆ ಅನುವಾದ ಮಾಡಿರುವ ಇವರು ಕನಕನ ಕೃತಿಗಳನ್ನು ಆಧರಿಸಿ ನಾಟಕಗಳನ್ನು ಬರೆದಿದ್ದಾರೆ. ರಾಮಧಾನ್ಯ ಚರಿತೆಯನ್ನು ತುಳುವಿಗೆ ಅನುವಾದ ಮಾಡಿ ಮೂಲದೊಂದಿಗೆ ಪ್ರಕಟಿಸಿದ್ದಾರೆ .ಇದಕ್ಕಾಗಿ ಅವರಿಗೆ ಕರ್ನಾಟಕ ಸರ್ಕಾರವು ‘ಕನಕ ಯುವ ಪ್ರಶಸ್ತಿ.’ಯನ್ನು ನೀಡಿದೆ.
ಸಾಹಿತ್ಯ ಸಂಸ್ಕೃತಿಗೆ ಇವರು ಕೊಟ್ಟಿರುವ ಕೊಡುಗೆಯನ್ನು ಗಮನಿಸಿ ಸರ್ಕಾರ, ಸಾಹಿತ್ಯ ಅಕಾಡೆಮಿ, ನಾಟಕ ಅಕಾಡೆಮಿ ಬಹುಮಾನ ನೀಡಿ ಗೌರವಿಸಿವೆ.. ಪ್ರಸ್ತುತ ಅವರು ಉಡುಪಿಯ ಎಂ ಜಿ ಎಂ ಕಾಲೇಜಿನಲ್ಲಿ ಪ್ರಾಧ್ಯಾಪಕರಾಗಿದ್ದಾರೆ.