

ಉಡುಪಿ: ಇಲ್ಲಿನ ಪೇಟೆಯಲ್ಲಿ 20 ದಿನಗಳ ಹಿಂದೆ ಬುಲೆಟ್ ಬೈಕ್ ಕಳ್ಳತನಕ್ಕೆ ಸಂಬಂಧಿಸಿ, ಇಬ್ಬರು ಅಂತರ್ ಜಿಲ್ಲಾ ಬೈಕ್ ಕಳ್ಳರನ್ನು ಪಡುಬಿದ್ರಿ ಪೊಲೀಸರು ಬಂಧಿಸಿದ್ದಾರೆ.
ಶಿವಮೊಗ್ಗ ಜಿಲ್ಲೆಯ ಸೂಳೆಬೈಲು ನಿವಾಸಿ ಮೊಹಮದ್ ರುಹಾನ್, ಶಿವಮೊಗ್ಗದ ಗೋಪಾಲ ನಿವಾಸಿ ತಾಜುದ್ದೀನ್ ಪಿ.ಕೆ ಯಾನೆ ತಾಜು ಬಂಧಿತ ಆರೋಪಿಗಳು. ಬಂಧಿತರಿಂದ ಕಳವು ಮಾಡಿದ ಬುಲೆಟ್ ಮತ್ತು ಕಳ್ಳತನ ಸಮಯ ಉಪಯೋಗಿಸಿದ ಮಾರುತಿ ರಿಟ್ಜ್ ಕಾರನ್ನು ಸ್ವಾಧೀನಪಡಿಸಿಕೊಂಡು, ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಲಾಗಿದೆ.
ನ್ಯಾಯಾಲಯವು ಆರೋಪಿಗಳಿಗೆ 15 ದಿನಗಳ ನ್ಯಾಯಾಂಗ ಬಂಧನ ವಿಧಿಸಿದೆ. ಆರೋಪಿ ತಾಜುದ್ದೀನ್ ಮೇಲೆ ಶಿವಮೊಗ್ಗ ಜಿಲ್ಲೆಯ ಕೋಟೆ, ವಿನೋಬ ನಗರ, ತುಂಗಾ ನಗರ, ದೊಡ್ಡಪೇಟೆ, ಆಗುಂಬೆ ಪೊಲೀಸ್ ಠಾಣೆಗಳಲ್ಲಿ ದರೋಡೆ, ಅಪಹರಣ, ವಾಹನ ಕಳವು ,ಸಾಗರ ನಗರ ಮತ್ತು ಗ್ರಾಮಾಂತರ ಪೊಲೀಸ್ ಠಾಣೆಗಳಲ್ಲಿ ದರೋಡೆ ಮತ್ತು ವಾಹನ ಕಳ್ಳತನ ,ಹಾಸನ ಜಿಲ್ಲೆಯಲ್ಲಿ ದರೋಡೆ ಮತ್ತು ಮನೆ ಕಳವು ಪ್ರಕರಣ, ಧಾರವಾಡ ನಗರ ಪೊಲೀಸ್ ಠಾಣೆಯಲ್ಲಿ ವಾಹನ ಕಳವು ಮತ್ತು ಮನೆ ಕಳವು ಪ್ರಕರಣಗಳು ದಾಖಲಾಗಿವೆ.
ಎಲ್ಲಾ ಪೊಲೀಸ್ ಠಾಣೆಗಳಲ್ಲಿ ನ್ಯಾಯಾ ಲಯದಿಂದ ಅರೆಸ್ಟ್ ವಾರೆಂಟ್ ಇತ್ತು.ಆರೋಪಿ ಮೊಹಮ್ಮದ್ ರುಹಾನ್ ವಿರುದ್ಧ ಬೆಂಗಳೂರು ಜಿಲ್ಲೆಯ ಜಿಗಣಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಚಿನ್ನದ ಅಂಗಡಿ ಕಳವು ,ಶಿವಮೊಗ್ಗ ಜಿಲ್ಲೆಯ ವಿನೋಬನಗರ ಪೊಲೀಸ್ ಠಾಣೆಯಲ್ಲಿ ವಿದ್ಯಾರ್ಥಿ ಅಪಹರಣ ಮತ್ತು ಕೋಟೆ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ವಾಹನ ಕಳವು ಪ್ರಕರಣ ದಾಖಲಾಗಿದ್ದು ತನಿಖೆಯಲ್ಲಿದೆ.