ಉಡುಪಿ: ಉಡುಪಿಯ ಚಿಟ್ಪಾಡಿ ಕಸ್ತೂರ್ಬಾ ನಗರ ಬಬ್ಬು ಸ್ವಾಮಿ ಸನ್ನಿಧಾನದಲ್ಲಿ ಜುಲೈ 4 ರ ನಡುರಾತ್ರಿ ದೈವಸ್ಥಾನದ ಕಾಣಿಕೆ ಡಬ್ಬಿ ಒಡೆದು ಕಳ್ಳತನ ನಡೆದಿತ್ತು. ಕಳ್ಳತನ ನಡೆದ ಮರುದಿನ ಪ್ರಕರಣ ಬೆಳಕಿಗೆ ಬಂದಿತ್ತು. ಆಗ ಭಕ್ತರು ಕಳ್ಳನ ಪತ್ತೆಗಾಗಿ ಸಾಮೂಹಿಕ ಪ್ರಾರ್ಥನೆ ಮಾಡಿದ್ದರು. ದೈವದ ಸನ್ನಿಧಾನದಲ್ಲಿ ಕಳ್ಳತನ ಮಾಡಿದರೆ ಅಪಚಾರವಾಗುವುದಿಲ್ಲವೇ ಎಂದು ಭಕ್ತರು ದೈವಕ್ಕೆ ಪ್ರಶ್ನಿಸಿದ್ದರು. ಇದಕ್ಕೆ ಉತ್ತರವಾಗಿ 24 ಗಂಟೆಯೊಳಗೆ ಕಳ್ಳನನ್ನು ಹುಡುಕಿ ಕೊಡುವುದಾಗಿ ದೈವ ಭಕ್ತರಿಗೆ ಅಭಯ ನೀಡಿತ್ತು. ಅಂತೆಯೇ ಕಳ್ಳ ಕೊನೆಗೂ ಸಿಕ್ಕಿಬಿದ್ದಿದ್ದಾನೆ. ಕಳ್ಳನ ಕೃತ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದನ್ನು ಬಹುತೇಕ ಭಕ್ತರು ಗಮನಿಸಿದ್ದರು. ಸಿಸಿ ಕ್ಯಾಮೆರಾದ ಫೂಟೇಜ್ ನಲ್ಲಿ ನೋಡಿದ ಕಳ್ಳನ ಚಹರೆಯನ್ನು ಹೋಲುವ ವ್ಯಕ್ತಿಯೊಬ್ಬ ನಗರದ ಕೆ ಎಸ್ ಆರ್ ಟಿ ಸಿ ಬಸ್ ಸ್ಟ್ಯಾಂಡ್ ನಲ್ಲಿ ನಿದ್ರೆ ಮಾಡುತ್ತಿರುವುದನ್ನು ಸ್ಥಳೀಯ ಆಟೋ ರಿಕ್ಷಾ ಚಾಲಕರೋರ್ವರು ಗಮನಿಸಿದ್ದಾರೆ.
ತಕ್ಷಣ ಸ್ಥಳೀಯ ಪೊಲೀಸರಿಗೆ ಆಟೋ ಚಾಲಕ ಕರೆ ಮಾಡಿದ್ದಾರೆ. ಸ್ಥಳಕ್ಕೆ ಬಂದ ಪೊಲೀಸರು ಕಳ್ಳ ನನ್ನ ಬಂಧಿಸಿ ವಶಕ್ಕೆ ಪಡೆದಿದ್ದಾರೆ. ಮೂಲತಃ ಬಾಗಲಕೋಟೆ ಮೂಲದ ಮುದುಕಪ್ಪ, ವಿಚಾರಣೆ ಮಾಡಿದಾಗ ಬಬ್ಬು ಸ್ವಾಮಿ ದೈವಸ್ಥಾನದಲ್ಲಿ ಕಳ್ಳತನ ಮಾಡಿರುವುದಾಗಿ ಒಪ್ಪಿಕೊಂಡಿದ್ದಾನೆ. ಕದ್ದ ಹಣ ದೊಂದಿಗೆ ಊರಿಗೆ ತೆರಳುವ ಸಿದ್ಧತೆ ಮಾಡಿದ್ದ. ಬಸ್ ಸಿಗದ ಕಾರಣ ಬಸ್ ಸ್ಟ್ಯಾಂಡ್ ನಲ್ಲಿ ಮಲಗಿದ್ದ ಮುದುಕಪ್ಪನಿಗೆ ಮುಂಜಾನೆ ಎಂಟು ಗಂಟೆಯಾದರೂ ಎಚ್ಚರಿಕೆ ಆಗದ ಹಿನ್ನೆಲೆಯಲ್ಲಿ ಸ್ಥಳೀಯರ ಕೈಗೆ ಸಿಕ್ಕಿಬಿದ್ದಿದ್ದಾನೆ. ಒಟ್ಟಾರೆ ಕರಾವಳಿಯ ದೈವಾರಾಧನೆ ಮಹತ್ವ ಎಂಥದ್ದು ಎನ್ನುವುದಕ್ಕೆ ಈ ಪ್ರಕರಣ ಒಂದು ದೊಡ್ಡ ನಿದರ್ಶನ.