

ಕುಂದಾಪುರ: ಉಡುಪಿ, ದಕ್ಷಿಣ ಕನ್ನಡ, ಶಿವಮೊಗ್ಗ, ಚಿಕ್ಕಮಗಳೂರು ಭಾಗದ ಭಕ್ತರಿಗೆ ಅನುಕೂಲವಾಗುವಂತೆ ಉಡುಪಿಯಿಂದ ಕೊಂಕಣ ಮಾರ್ಗದಲ್ಲಿ ವಿಶೇಷ ಕುಂಭಮೇಳ ರೈಲು ಓಡಿಸುವಂತೆ ಸಂಸದ ಕೋಟ ಶ್ರೀನಿವಾಸ ಪೂಜಾರಿ ಅವರ ಮನವಿಗೆ ಸ್ಪಂದಿಸಿರುವ ರೈಲ್ವೇ ಸಚಿವ ಅಶ್ವಿನ್ ವೈಷ್ಣವ್, ಶೀಘ್ರದಲ್ಲೇ ಕುಂಭ ಮೇಳ ವಿಶೇಷ ರೈಲನ್ನು ಉಡುಪಿ ಪ್ರಯಾಗ್‌ರಾಜ್ ನಡುವೆ ಓಡಿಸುವುದಾಗಿ ಭರವಸೆ ನೀಡಿದ್ದಾರೆ. ಶಿವರಾತ್ರಿಗೂ ಹತ್ತುದಿನ ಮುಂಚಿತವಾಗಿ ಫೆ.16-17ರ ಸುಮಾರಿಗೆ ಓಡುವ ಸಮಯ ಪಟ್ಟಿ ಇರುವ ವಿಶೇಷ ರೈಲನ್ನು ಘೊಷಿಸಬೇಕು ಎಂಬ ಬೇಡಿಕೆಯನ್ನು ಸಂಸದರು ಫೆ.9ರಂದು ದೆಹಲಿಯಲ್ಲಿಸಚಿವರಿಗೆ ಸಲ್ಲಿಸಿದ್ದರು. ದೇಶಾದ್ಯಂತ ಎಲ್ಲಾ ನಗರಗಳಿಂದಲೂ ವಿಶೇಷ ರೈಲುಗಳು ಓಡುತ್ತಿರುವ ಹಿನ್ನೆಲೆಯಲ್ಲಿ ಭಾರತೀಯ ರೈಲ್ವೆಯ ಕುಂಭ ಮೇಳ ಸೇವೆಗಳು ಉಡುಪಿ ಜಿಲ್ಲೆಯ ಅಸಂಖ್ಯಾತ ಭಕ್ತರಿಗೂ ಲಭಿಸಬೇಕು ಎಂಬ ಕಾರಣದಿಂದ ಸಂಸದರು ವಿಶೇಷ ಪ್ರಯತ್ನ ನಡೆಸಿದ್ದು, ದೇಶಾದ್ಯಂತ ರೈಲು ಬೋಗಿಗಳ ಕೊರತೆಯ ಕಾರಣಗಳನ್ನು ಇಲಾಖೆ ನೀಡುತಿದ್ದರೂ, ಸಾಮಾನ್ಯ ಜನರಿಗೂ ಕೈಗೆಟುಕಲಿ ಎಂಬ ದೃಷ್ಟಿಯಿಂದ, ಜನರಲ್, ಮತ್ತು ಏಸಿ ಕೋಚ್ ಇರುವ ರೈಲಿನ ವ್ಯವಸ್ಥೆ ಮಾಡುವಂತೆ ಸಂಸದರು ಮನವಿ ಸಲ್ಲಿಸಿದ್ದಾರೆ.