ಕುಂದಾಪುರ: ಬೈಕಿನಲ್ಲಿ ಹೋಗುತ್ತಿದ್ದಾಗಲೇ ಚಾಲಕನಿಗೆ ಹೃದಯಾಘಾತವಾದ ಪರಿಣಾಮ ನೆಲಕ್ಕುರುಳಿದ ಬೈಕ್ ಸವಾರ ಸಾವನ್ನಪ್ಪಿದ ದುರಂತ ಘಟನೆ ಕುಂದಾಪುರ ತಾಲೂಕಿನ ಶೇಡಿಮನೆ ಗ್ರಾಮದ ಬಾಗಳಮಕ್ಕಿ ಎಂಬಲ್ಲಿ ನಡೆದಿದೆ. ಬಾಗಳಮಕ್ಕಿಯ ಶೇಡಿಮನೆ ಚಕ್ಕರಮಕ್ಕಿ ನಿವಾಸಿ ಅಪ್ಪು ಪೂಜಾರಿಯ ಮಗ ಸುಧಾಕರ ಪೂಜಾರಿ (35) ಎಂಬುವರೇ ಹೃದಯಾಘಾತದಿಂದ ಮೃತಪಟ್ಟ ಬೈಕ್ ಚಾಲಕ. ರಾತ್ರಿ ತನ್ನ ಸಣ್ಣ ಅಂಗಡಿಯನ್ನು ಮುಚ್ಚಿ ಸ್ನೇಹಿತರೊಂದಿಗೆ ಮಾತನಾಡಿ ಮನೆಗೆ ಬೈಕಿನಲ್ಲಿ ಒಬ್ಬರೇ ವಾಪಾಸ್ಸಾಗುತ್ತಿದ್ದರು. ಬಾಗಳಮಕ್ಕಿ ಉದಯ ಶೆಟ್ಟಿ ಎಂಬುವರ ಮನೆ ಸಮೀಪ ದಾಟಿ ಬರುತ್ತಿದ್ದಾಗ ಹೃದಯಾಘಾತವಾಗಿದೆ. ಪರಿಣಾಮ ಬೈಕ್ ಸಮೇತ ಬಿದ್ದಿದ್ದಾರೆ. ರಾತ್ರಿಯಾಗಿದ್ದರಿಂದ ಜನಸಂಚಾರ ಇರದ ಪರಿಣಾಮ ಯಾರ ಗಮನಕ್ಕೂ ಬಾರದೆ ಅವರು ಸಾವನ್ನಪ್ಪಿದ್ದಾರೆ ಎಂದು ತಿಳಿದು ಬಂದಿದೆ. ಮಿತಭಾಷಿಯಾಗಿರುವ ಸುಧಾಕರ ಪೂಜಾರಿಯವರಿಗೆ ನಾಲ್ಕೂವರೆ ವರ್ಷದ ಹಿಂದೆ ವಿವಾಹವಾಗಿದ್ದು ಇಬ್ಬರು ಪುಟ್ಟ ಗಂಡು ಮಕ್ಕಳಿದ್ದಾರೆ. ಈ ಹಿಂದೆ ಅರಸಮ್ಮನಕಾನು ಎಂಬಲ್ಲಿದ್ದವುದಯ ಪೂಜಾರಿ ಇತ್ತೀಚೆಗಷ್ಟೆ 10 ಸೆಂಟ್ಸ್ ಜಾಗ ಖರೀದಿಸಿ ಮನೆ ಕಟ್ಟಿದ್ದರು. ಸುಧಾಕರ ಪೂಜಾರಿ ನಿಧನಕ್ಕೆ ಊರಿಗೆ ಊರೇ ಸಂತಾಪ ಸೂಚಿಸಿದೆ ಕಡು ಬಡತನದಲ್ಲಿಯೇ ಸ್ವ ಉದ್ಯೋಗ ಮಾಡಿಕೊಂಡು ಸಮಾಜ ಸೇವೆಯಲ್ಲಿಯೂ ಚಿರಪರಿಚಿತರಾಗಿದ್ದ ಸುಧಾಕರ ಪೂಜಾರಿ ತನ್ನ ಸ್ವಂತ ದುಡಿಮೆಯಿಂದ ಸಹೋದರರಿಗೆ ನೆಲೆ ಕಲ್ಪಿಸಿದ್ದರು. ಅಮಾಸೆಬೈಲು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.