ಉಡುಪಿ: ಅಪರಿಚಿತ ವಾಹನದಿಂದ ರಸ್ತೆಗೆ ತೈಲ ಸೋರಿಕೆಯಾಗಿ ಹಲವಾರು ದ್ವಿಚಕ್ರ ವಾಹನಗಳು ಸ್ಕಿಡ್ ಆಗಿ ಸವಾರರಿಗೆ ಸಣ್ಣಪುಟ್ಟ ಗಾಯಗಳಾದ ಘಟನೆ ಉಡುಪಿಯ ಬಸ್ ನಿಲ್ದಾಣದ ಬಳಿ ನಡೆದಿದೆ. ತೈಲ ಸೋರಿಕೆಯಿಂದ ರಸ್ತೆ ಜಾರುತ್ತಿತ್ತು, ಪರಿಣಾಮ ಏಳೆಂಟು ದ್ವಿಚಕ್ರ ವಾಹನ ಸವಾರರು ಬಿದ್ದಿದ್ದಾರೆ. ತಕ್ಷಣ ಅಗ್ನಿಶಾಮಕ ದಳದ ಸಿಬ್ಬಂದಿಗೆ ಮಾಹಿತಿ ನೀಡಲಾಗಿದ್ದು, ರಸ್ತೆಯಿಂದ ತೈಲವನ್ನು ತೆರವುಗೊಳಿಸಲು ನೀರು ಸಿಂಪಡಿಸಿ, ವಾಹನ ಸಂಚಾರಕ್ಕೆ ಅನುವು ಮಾಡಿಕೊಡಲಾಯಿತು. ಅಗ್ನಿಶಾಮಕ ದಳದ ಪದ್ಮನಾಭ ಕಾಂಚನ್, ದಿವಾಕರ್ ಮತ್ತು ಅರುಣ್, ಸಮಾಜ ಸೇವಕ ನಿತ್ಯಾನಂದ ಒಳಕಾಡು ಅವರ ಬೆಂಬಲದೊಂದಿಗೆ ಕಾರ್ಯಾಚರಣೆ ನಡೆಸಲಾಯಿತು. ತೈಲ ಸೋರಿಕೆಗೆ ಕಾರಣವಾದ ವಾಹನ ಯಾವುದೆಂದು ತಿಳಿದಿಲ್ಲ. ಶಿರಿಬೀಡು ಜಂಕ್ಷನ್‌ನಿಂದ ಕಲ್ಸಂಕವರೆಗಿನ ಭಾಗದಲ್ಲಿ ತೈಲ ಸೋರಿಕೆಯಾಗಿರುವುದು ಕಂಡುಬಂದಿದೆ. ಅಪಘಾತಕ್ಕೆ ಕಾರಣವಾದ ವಾಹನವನ್ನು ಗುರುತಿಸಲು ಪೊಲೀಸರು ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಬೇಕು ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.