
ಕಾರ್ಕಳ: ಕಾರ್ಕಳ ಗ್ರಾಮಾಂತರ ಠಾಣಾ ವ್ಯಾಪ್ತಿಯ ನಿಟ್ಟೆ ಗ್ರಾಮದ ದಿನೇಶ್ ಶೆಟ್ಟಿಗಾರ್ ಎಂಬವರ ತೋಟದಲ್ಲಿದ್ದ 4 ಲಕ್ಷ ಮೌಲ್ಯದ ಒಟ್ಟು 9 ಶ್ರೀಗಂಧದ ಮರಗಳನ್ನು ಜೂನ್ 16ರಂದು ರಾತ್ರಿ ಕಳ್ಳತನ ಮಾಡಿಕೊಂಡು ಹೋಗಿದ್ದ ಬಂಟ್ವಾಳದ ಓರ್ವನ ಸಹಿತ ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದು, ಅವರಿಂದ ಕಳವು ಮಾಡಲಾದ ಶ್ರೀಗಂಧದ ತುಂಡುಗಳನ್ನು ವಶಪಡಿಸಿಕೊಂಡಿದ್ದಾರೆ.
ಭಾರತೀಯ ನ್ಯಾಯ ಸಂಹಿತೆ 2023 ಕಲಂ 86,87 ಕರ್ನಾಟಕ ಅರಣ್ಯ ಕಾಯ್ದೆ1963ರಂತೆ ದಾಖಲಾದ ಪ್ರಕರಣದಲ್ಲಿ ತನಿಖೆಯನ್ನು ಕೈಗೆತ್ತಿಕೊಂಡ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣಾ ಕಾನೂನು ಸುವ್ಯವಸ್ಥೆ ಮತ್ತು ಸಂಚಾರ ವಿಭಾಗದ ಪಿಎಸ್‌ಐ ಪ್ರಸನ್ನ ಎಂ.ಎಸ್. ಮತ್ತು ತನಿಖಾ ವಿಭಾಗದ ಪಿಎಸ್‌ಐ ಸುಂದರ ತಂಡ, ಆರೋಪಿಗಳಾದ ಮೂಡುಬೆಳ್ಳೆಯ ಗಣೇಶ್ (44), ಎಣ್ಣೆಹೊಳೆಯ ಸಂತೋಷ(35) ಹಾಗೂ ಬಂಟ್ವಾಳ ತಾಲೂಕು ಬಾಳೆಪುಣಿಯ ಮೊಯ್ದೀನ್ ಯಾನೆ ಮೊಯಿದು ಕುಂಞ (60) ಎಂಬವರನ್ನು ಬಂಧಿಸಿದೆ.
ಪ್ರಕರಣದ ವಿಚಾರಣಾ ಸಮಯ ಆರೋಪಿಗಳು ಶಿರ್ವ ಠಾಣಾ ವ್ಯಾಪ್ತಿಯಲ್ಲಿ ಕೂಡ ಶ್ರೀಗಂಧದ ಮರಗಳನ್ನು ಕಳವು ಮಾಡಿರುವ ಬಗ್ಗೆ ಒಪ್ಪಿಕೊಂಡಿದ್ದಾರೆ. ಪ್ರಕರಣದ ಆರೋಪಿಗಳನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿದೆ.
ಜಿಲ್ಲಾ ಪೊಲೀಸ್ ಅಧೀಕ್ಷಕ ಹರಿರಾಮ್ ಶಂಕರ್ ಇವರ ಆದೇಶದಂತೆ ಕಾರ್ಕಳ ಉಪವಿಭಾಗ ಸಹಾಯಕ ಪೊಲೀಸ್ ಅಧೀಕ್ಷಕರಾದ ಡಾ. ಹರ್ಷ ಪ್ರೀಯಂವದ ನಿರ್ದೇಶನದಲ್ಲಿ ಕಾರ್ಕಳ ವೃತ್ತ ನಿರೀಕ್ಷಕ ಮಂಜಪ್ಪ ಡಿ.ಆರ್ ಮಾರ್ಗದರ್ಶ ನದಲ್ಲಿ ಪತ್ತೆ ಕಾರ್ಯ ಕೈಗೊಳ್ಳಲಾಗಿತ್ತು.
