ಉಡುಪಿ: ಬ್ಯಾಂಕ್ ಮ್ಯಾನೇಜರ್‌ವೊಬ್ಬರಿಗೆ ಅಧಿಕ ಲಾಭಾಂಶದ ಆಮಿಷವೊಡ್ಡಿದ ಆನ್‌ಲೈನ್ ವಂಚಕರು ಅವರ ಖಾತೆಯಿಂದಲೇ 14 ಲಕ್ಷ ರೂ.ಗಳನ್ನು ವರ್ಗಾಯಿಸಿಕೊಂಡ ಘಟನೆ ನಡೆದಿದೆ. ದೊಂಡೇರಂಗಡಿಯಲ್ಲಿರುವ ಬ್ಯಾಂಕೊಂದರ ಮ್ಯಾನೇಜರ್ ಪವನ್ ಕುಮಾರ್ ವಂಚನೆಗೆ ಒಳಗಾದವರು. ಯಾರೋ ಅಪರಿಚಿತರು ಪವನ್ ಕುಮಾರ್ ಅವರನ್ನು C22 Investment Alliance Trading ಎಂಬ ವಾಟ್ಸಾಪ್ ಗ್ರೂಪ್‌ಗೆ ಸೇರ್ಪಡೆ ಮಾಡಿದ್ದರು. ಅನಂತರ ಅವರ ಮೊಬೈಲ್‌ನಿಂದ ಷೇರು ಮಾರುಕಟ್ಟೆಯ ಹಾಗೂ ಲಾಭಾಂಶಗಳ ಬಗ್ಗೆ ಮಾಹಿತಿ ತಿಳಿಸಿ ಪವನ್ ಕುಮಾರ್ ಅವರನ್ನು ನಂಬಿಸಿ ಹೆಚ್ಚಿನ ಲಾಭಾಂಶ ಪಡೆಯಬಹುದೆಂಬ ಆಸೆ ತೋರಿಸಿದ್ದಾರೆ. ಬಳಿಕ Causeway App ಮೂಲಕ ಹಣವನ್ನು ಹೂಡಿಕೆ ಮಾಡಲು ತಿಳಿಸಿದ್ದಾರೆ. ಇದನ್ನು ನಂಬಿದ ಅವರು ಅಪರಿಚಿತರು ಸೂಚಿಸಿದ ವಿವಿಧ ಬ್ಯಾಂಕ್ ಖಾತೆಗ ಳಿಗೆ ಅ.7ರಿಂದ 19ರವರೆಗೆ ಹಂತ ಹಂತವಾಗಿ 14,00,000 ರೂ.ಗಳನ್ನು ಹೂಡಿಕೆ ಮಾಡಿದ್ದಾರೆ. ಆದರೆ ಆರೋಪಿಗಳು ಹಣವನ್ನಾಗಲಿ ಅಥವಾ ಲಾಭಾಂಶವನ್ನು ನೀಡದೆ ವಂಚನೆ ಎಸಗಿದ್ದಾರೆ. ಸೆನ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.