
ಕಾರ್ಕಳ : ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಸಂಚಲನ ಉಂಟು ಮಾಡಿದ್ದ ಗ್ಯಾಂಗ್‌ರೇಪ್ ಪ್ರಕರಣದ ಮುಖ್ಯ ಆರೋಪಿ ಅಲ್ತಾಫ್ ಎಂಬಾತನಿಗೆ ಹೆಚ್ಚುವರಿ ಜಿಲ್ಲಾ ನ್ಯಾಯಾಲಯ ಜಾಮೀನು ಮಂಜೂರು ಮಾಡಿದೆ. ಕಾರ್ಕಳದ ಪಳ್ಳಿಯ ರಂಗನಪಲ್ಕೆ ಸಮೀಪ ಕಾಡಿನಲ್ಲಿ ಕಳೆದ ಆಗಸ್ಟ್‌ನಲ್ಲಿ ನಡೆದ ಗ್ಯಾಂಗ್‌ರೇಪ್ ಕೇಸಿನಲ್ಲಿ ಅಲ್ತಾಫ್ ಒಂದನೇ ಆರೋಪಿಯಾಗಿದ್ದ. ಅಲ್ತಾಫ್ ಪರವಾಗಿ ಕಾರ್ಕಳದ ವಕೀಲ ರವಿಶಂಕರ್ ಬಿ.ಎಂ. ವಾದಿಸಿದ್ದರು. ಕುಕ್ಕುಂದೂರು ಅಯ್ಯಪ್ಪ ನಗರದ ಗರಡಿ ಸಮೀಪದ ಪರಿಶಿಷ್ಟ ಪಂಗಡದ 21 ವರ್ಷದ ಯುವತಿಯನ್ನು ಪರಿಚಿತ ಟಿಪ್ಪರ್ ಚಾಲಕ ಅಲ್ತಾಫ್ ಕಾರಿನಲ್ಲಿ ಕರೆದುಕೊಂಡು ಹೋಗಿ ಇಬ್ಬರು ಸ್ನೇಹಿತರ ಜೊತೆ ಸೇರಿ ಗ್ಯಾಂಗ್‌ರೇಪ್ ಮಾಡಿದ ಪ್ರಕರಣ ರಾಜ್ಯಾದ್ಯಂತ ಸುದ್ದಿ ಮಾಡಿತ್ತು. ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತಿಭಟನೆಗಳು ನಡೆದಿದ್ದವು. ಇದೀಗ ಆರೋಪಿಗೆ ಜಾಮೀನು ಮಂಜೂರಾಗಿದೆ.
