March 4, 2026
WhatsApp Image 2026-03-04 at 12.20.35 PM

ಮಲ್ಪೆ :  ಹಿಂದೂ ಸಂಘಟನೆಯ ಮುಖಂಡ ಮಂಜು ಕೊಳ ಅವರಿಗೆ ಯುವಕರ ತಂಡ ಚೂರಿಯಿಂದ ಇರಿದ ಪ್ರಕರಣಕ್ಕೆ ಸಂಬಂಧಿಸಿ ಮಲ್ಪೆ ಪೊಲೀಸರು 5 ಮಂದಿ ಯುವಕರನ್ನು  ವಿಚಾರಣೆ ನಡೆಸುತ್ತಿದ್ದಾರೆ. ಕೃತ್ಯ ವೈಯಕ್ತಿಕ ಕಾರಣಗಳಿಂದ ನಡೆದಿದ್ದಾಗಿ ಉಡುಪಿ ಎಸ್ಪಿ ಹರಿರಾಮ್ ಶಂಕರ್ ತಿಳಿಸಿದ್ದಾರೆ.

ಮಲ್ಪೆ ಬೀಚ್ ಸಮೀಪ ನಡೆದ ಚಾಕು ದಾಳಿ ಪ್ರಕರಣದಲ್ಲಿ ನಾಲ್ವರನ್ನು ಮಲ್ಪೆ ಪೊಲೀಸರು ಬಂಧಿಸಿದ್ದಾರೆ. ಕಾನೂನಿನ ಸಂಘರ್ಷಕ್ಕೋಳಗಾದ ಬಾಲಕನನ್ನೂ ವಶಕ್ಕೆ ಪಡೆದು ಬಾಲ ನ್ಯಾಯ ಮಂಡಳಿಗೆ ಹಾಜರುಪಡಿಸಲಾಗುತ್ತಿದೆ.

ಮಾರ್ಚ್ 3ರಂದು ರಾತ್ರಿ ಸುಮಾರು 9.30ಕ್ಕೆ ಉಡುಪಿ ತಾಲೂಕು ಕೊಡವೂರು ಗ್ರಾಮದ ಮಲ್ಪೆ ಬೀಚ್ ಬಳಿ ಇರುವ ಬ್ಲೂ ವೇವ್ಸ್ ಗೆಸ್ಟ್ ಹೌಸ್ ಸಮೀಪ ಈ ಘಟನೆ ನಡೆದಿದೆ. ಆರೋಪಿತರಾದ ಅಮೃತ್ ಭಂಡಾರಿ, ಪ್ರಜ್ಞೇಶ್, ಪುನಿತ್ ಪೂಜಾರಿ ಮತ್ತು ಅಭೀಜಿತ್ ಅವರು ಬಾಲಕನೊಂದಿಗೆ ಸೇರಿ ಒಂದೇ ಉದ್ದೇಶದಿಂದ ಅಕ್ರಮ ಕೂಟ ಸೇರಿಕೊಂಡು, KA19AD1036 ಸಂಖ್ಯೆಯ ಬಿಳಿ ಬೊಲೆರೊ ವಾಹನದಲ್ಲಿ ಸ್ಥಳಕ್ಕೆ ಬಂದಿದ್ದಾರೆ ಎನ್ನಲಾಗಿದೆ. ಅಮೃತ್ ಭಂಡಾರಿಯ ತಂಗಿಯ ವಿಚಾರವಾಗಿ ತಗಾದೆ ತೆಗೆದ ಆರೋಪಿಗಳು, ಅಲ್ಲಿ ಮರಳಿನಲ್ಲಿ ಕುಳಿತಿದ್ದ ಸಂತೋಷ್ ಎ. ಅಮೀನ್ ಹಾಗೂ ಅವರ ಸ್ನೇಹಿತರಾದ ಮಂಜುನಾಥ ಸಾಲಿಯಾನ್ @ ಮಂಜು ಕೊಳ, ಧನುಷ್, ಲತೀಶ್ ಮತ್ತು ವರುಣ್ ಅವರೊಂದಿಗೆ ಜಗಳ ಆರಂಭಿಸಿದ್ದಾರೆ.

ಈ ವೇಳೆ ಮಂಜುನಾಥರನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿ, ಪ್ರಜ್ಞೇಶ್ ತನ್ನ ಪ್ಯಾಂಟ್ ಕಿಸೆಯಲ್ಲಿದ್ದ ಚಾಕುವಿನಿಂದ ಮಂಜುನಾಥರ ಹೊಟ್ಟೆಯ ಎಡಭಾಗಕ್ಕೆ ಚುಚ್ಚಿ ಗಂಭೀರವಾಗಿ ಗಾಯಗೊಳಿಸಿದ್ದಾನೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

ಇದೇ ವೇಳೆ ವರುಣ್ ಮತ್ತು ಲತೀಶ್ ಅವರಿಗೂ ಚಾಕುವಿನಿಂದ ಗಾಯವಾಗಿದ್ದು, ತಡೆಯಲು ಬಂದ ಸಂತೋಷ್, ಧನುಷ್ ಸೇರಿದಂತೆ ಇತರರಿಗೆ ಕೈ ಹಾಗೂ ಕಾಲಿನಿಂದ ಹಲ್ಲೆ ನಡೆಸಿ, ಜೀವ ಬೆದರಿಕೆ ಹಾಕಿ ಆರೋಪಿಗಳು ಸ್ಥಳದಿಂದ ಪರಾರಿಯಾಗಿದ್ದರು.

ಈ ಸಂಬಂಧ ಮಲ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಪ್ರಕರಣದ ತನಿಖೆಯನ್ನು ಕೈಗೊಂಡ ಮಲ್ಪೆ ಪೊಲೀಸ್ ಠಾಣೆಯ ಪೊಲೀಸ್ ಉಪನಿರೀಕ್ಷಕ ಈರಣ್ಣ ಶಿರಗುಂಪಿ ಅವರು ಆರೋಪಿಗಳಾದ ಅಮೃತ್ ಭಂಡಾರಿ (22), ಮೂಡುಪಲಿಮಾರು, ಕಾಪು ತಾಲೂಕು ಪ್ರಜ್ಞೇಶ್ (22), ಪಲಿಮಾರು ಗ್ರಾಮ, ಕಾಪು ತಾಲೂಕು ಪುನಿತ್ ಪೂಜಾರಿ (24), ಪಲಿಮಾರು ಗ್ರಾಮ, ಕಾಪು ತಾಲೂಕು ಅಭೀಜಿತ್ (20), ಗಾಂದೊಟ್ಟು, ಇನ್ನಾ ಗ್ರಾಮ, ಕಾರ್ಕಳ ತಾಲೂಕು ಇವರನ್ನು ಬಂಧಿಸಿದ್ದು, ತನಿಖೆ ಪೂರ್ಣಗೊಳಿಸಿ ಮಾನ್ಯ ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.

ಈ ಕಾರ್ಯಾಚರಣೆಯನ್ನು ಉಡುಪಿ ಉಪವಿಭಾಗದ ಡಿವೈಎಸ್ಪಿ ಬೆಳ್ಳಿಯಪ್ಪ ಹಾಗೂ ಮಲ್ಪೆ ವೃತ್ತದ ಸಿಪಿಐ ರಾಮಚಂದ್ರ ನಾಯಕ್ ಅವರ ಮಾರ್ಗದರ್ಶನದಲ್ಲಿ ನಡೆಸಲಾಗಿದೆ. ಮಲ್ಪೆ ಪೊಲೀಸ್ ಠಾಣೆಯ ಪಿಎಸ್ಐ ಈರಣ್ಣ ಶಿರಗುಂಪಿ ಹಾಗೂ ಸಿಬ್ಬಂದಿ ಪತ್ತೆ ಕಾರ್ಯದಲ್ಲಿ ಭಾಗವಹಿಸಿದ್ದರು.

About The Author

Leave a Reply

Your email address will not be published. Required fields are marked *

You cannot copy content of this page.