
ಉಡುಪಿ: ಆರ್ಮಿ ಆಫೀಸರ್ ಎಂದು ನಂಬಿಸಿ ಬಾಡಿಗೆ ಮನೆ ಹೆಸರಿನಲ್ಲಿ ಸಾವಿರಾರು ರೂ. ಆನ್‌ಲೈನ್ ವಂಚಿಸಿರುವ ಬಗ್ಗೆ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಎಸ್.ಎಸ್.ನಾಯಕ್(71) ಎಂಬವರು ಮನೆ ಬಾಡಿಗೆ ನೀಡುವ ಬಗ್ಗೆ ಮಾಹಿತಿಯನ್ನು ಓಎಲ್‌ಎಕ್ಸ್‌ನಲ್ಲಿ ಹಾಕಿದ್ದರು. ಜು.30ರಂದು ಅಪರಿಚಿತ ವ್ಯಕ್ತಿಯೋರ್ವ ಕರೆ ಮಾಡಿ ತಾನು ಆರ್ಮಿ ಆಫೀಸರ್ ಎಂಬುದಾಗಿ ನಂಬಿಸಿ ನನಗೆ ಉಡುಪಿ ಜಿಲ್ಲೆಗೆ ವರ್ಗಾವಣೆ ಆಗಿದ್ದು, ಮನೆ ಬಾಡಿಗೆಗೆ ಸಂಬಂಧಿಸಿದ ಮುಂಗಡ ಹಣವನ್ನು ನಿಮ್ಮ ಖಾತೆಗೆ ನಮ್ಮ ಮೇಲಾಧಿಕಾರಿಯವರು ಪಾವತಿಸುವುದಾಗಿ ತಿಳಿಸಿದ್ದನು.
ಅವರು ವಾಟ್ಸಾಪ್ ಮೂಲಕ ಕಳುಹಿಸಿದ ಆನ್‌ಲೈನ್ ಪಾರಂ ಭರ್ತಿ ಮಾಡುತ್ತಾ ಹೋಗುವಾಗ ಇಂಟರ್‌ನೆಟ್ ಬ್ಯಾಂಕಿಂಗ್ ಪಾಸ್‌ವರ್ಡ್ ಹಾಗೂ ಯುಸರ್ ಐಡಿ ಕೇಳಿದ್ದು, ಆಗ ಎಸ್.ಎಸ್.ನಾಯಕ್ ಕೊಡುವುದಿಲ್ಲ ಎಂದು ಹೇಳಿ ಕಾಲ್ ಕಟ್ ಮಾಡಿದ್ದಾರೆ. ಮರುದಿನ ತನ್ನ ಇಂಟರ್‌ನೆಟ್ ಬ್ಯಾಂಕ್ ಖಾತೆಯನ್ನು ನೋಡಿದಾಗ ಅವರ ಖಾತೆಯಿಂದ 98,000ರೂ. ಹಣ ಸೈಬರ್ ವಂಚಕರು ವರ್ಗಾವಣೆ ಮಾಡಿ ಮೋಸ ಮಾಡಿರುವುದು ತಿಳಿದುಬಂದಿದೆ. ಮಣಿಪಾಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
