

ರಾಜ್ಯದಲ್ಲಿ ಅರಾಜಕತೆ ಸೃಷ್ಟಿಯಾಗಿದೆ. ಯಾರದ್ದೊ ಕೊಲೆಗೆ ಮತ್ತೊಂದು ಸೇಡಿನ ಕೊಲೆಯಂತಹ ಘಟನೆಗಳಿಂದ ಜನರು ಬೆಚ್ಚಿ ಬೀಳುತ್ತಿದ್ದಾರೆ. ಜನ ಕಾನೂನು ಮತ್ತು ನ್ಯಾಯಾಂಗದಂತ ವ್ಯವಸ್ಥೆ ಮೇಲೆ ವಿಶ್ವಾಸ ಕಳೆದುಕೊಂಡು ಹೊಡೆದಾಡಿಕೊಳ್ಳುವಂತಾಗಿದೆ” ಎಂದು ಉಡುಪಿಯ ಪೇಜಾವರ ಪೀಠದ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿಯವರು ಆತಂಕ ವ್ಯಕ್ತಪಡಿಸಿದರು.
ಶುಕ್ರವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, “ಮಂಗಳೂರಿನಲ್ಲಿ ಹಿಂದೂ ಕಾರ್ಯಕರ್ತನ ಕೊಲೆ ಪ್ರಕರಣವು ರಾಜ್ಯದಲ್ಲಿನ ಅರಾಜಕತೆಯನ್ನು ತೆರೆದಿಡುತ್ತಿದೆ. ಸರ್ಕಾರ ಯೋಗ್ಯವಾದ ಕ್ರಮ ಕೈಗೊಳ್ಳುವ ಸಂಕಲ್ಪ ಮಾಡಿದ್ದರೆ, ಇಂತಹ ಅತೀರೇಕಗಳು ಘಟಿಸುತ್ತಿರಲಿಲ್ಲ. ಎಲ್ಲೋ ಒಂದು ಕಡೆ ದೊಂಬಿ ನಡೆಯುತ್ತದೆ. ಮತ್ತೊಂದು ಕಡೆ ಪ್ರತೀಕಾರ ನಡೆಯತ್ತದೆ. ಇಂತಹ ಒಂದೇ ಘಟನೆ ಎಂದಲ್ಲ, ಅನೇಕ ಘಟನೆಗಳು ರಾಜ್ಯದಲ್ಲಿ ನಿತ್ಯ ನಡೆಯುತ್ತಿವೆ. ಇದನ್ನು ಅರಾಜಕತೆ ಎನ್ನದೇ ಬೇರೆ ದಾರಿಯಿಲ್ಲ” ಎಂದರು.
“ರಾಜ್ಯದಲ್ಲಿ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರ ಕೊಲೆ, ಮಗುವಿನ ಮೇಲೆ ಅತ್ಯಾಚಾರ ನಡೆಯುತ್ತದೆ. ಸರ್ಕಾರ ಮತ್ತು ನ್ಯಾಯಾಂಗದ ಮೇಲೆ ಜನ ವಿಶ್ವಾಸ ಕಳೆದುಕೊಂಡಾಗ ರಾಜ್ಯದಲ್ಲಿ ಇಂತಹ ಘಟನೆ ನಡೆಯುತ್ತವೆ. ರಾಜ್ಯದಲ್ಲಿ ದಿನೇ ದಿನೆ ಜನ ಕಾನೂನು ಕೈಗೆತ್ತಿಕೊಳ್ಳುವ ಪ್ರವೃತ್ತಿ ಹೆಚ್ಚಾಗುತ್ತಿದೆ. ಈ ಬಗ್ಗೆ ನ್ಯಾಯಾಂಗ, ಕಾರ್ಯಾಂಗ, ಶಾಸಕಾಂಗ ಹಾಗೂ ಪತ್ರಿಕಾರಂಗ ಎಲ್ಲವೂ ರಾಜ್ಯದ ಹಿತಾಸಕ್ತಿ ಮತ್ತು ಜನರ ಹಿತದ ಬಗ್ಗೆ ಸಮಗ್ರ ಚಿಂತನೆ ನಡೆಸಬೇಕಿದೆ” ಎಂದು ಪೇಜಾವರ ಶ್ರೀಗಳು ಸಲಹೆ ನೀಡಿದರು.
ತಪ್ಪಿತಸ್ಥರಿಗೆ ಶಿಕ್ಷೆ ಅನಿವಾರ್ಯ: ಜಮ್ಮು-ಕಾಶ್ಮೀರದ ಪಹಲ್ಗಾಮ್ನಲ್ಲಿ ನಡೆದ ಘಟನೆಯ ಬಗ್ಗೆ ಪ್ರತಿಕ್ರಿಯೆ ನೀಡಿದ ಶ್ರೀಗಳು, ”ತಪ್ಪಿತಸ್ಥರಿಗೆ ಶಿಕ್ಷೆ ಅನಿವಾರ್ಯ. ಯಾವುದೇ ಸರ್ಕಾರ ಇರಲಿ, ತಪ್ಪಿತಸ್ಥರು ಎಷ್ಟೆ ದೊಡ್ಡವರಿದ್ದರೂ ಶಿಕ್ಷೆ ನೀಡಬೇಕು. ಈ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಹಾಗೂ ಸೇನೆ ತಗೆದುಕೊಳ್ಳುವ ನಿರ್ಣಯಕ್ಕೆ ಎಲ್ಲರೂ ಪೂರ್ಣವಾದ ಬೆಂಬಲ ನೀಡಬೇಕು. ದೇಶದ ಎಲ್ಲಾ ಜನ ನೈತಿಕ, ಬಾಹ್ಯವಾಗಿ ಬೆಂಬಲ ನೀಡಬೇಕು. ಸರ್ಕಾರ ಹಾಗೂ ಸೈನ್ಯದ ವಿರುದ್ಧವಾಗಿ ಮಾತನಾಡಿ ಸೇನಾನಿಗಳ ನೈತಿಕ ಸ್ಥೈರ್ಯ ಕಳೆಯುವ ಕೆಲಸ ಯಾರೂ ಮಾಡಬಾರದು. ಹಾಗೆ ಮಾಡಿದರೆ ನಮ್ಮ ತಲೆಯ ಮೇಲೆ ನಾವೆ ಕಲ್ಲು ಹಾಕಿಕೊಂಡಂತೆ” ಎಂದು ತಿಳಿಸಿದರು.
“ಯುದ್ಧ ಬೇಕು ಅಥವಾ ಬೇಡ ಎಂದು ನಾವು ನಿರ್ಣಯಿಸಬಾರದು. ಅದನ್ನು ಕೇಂದ್ರ ಸರ್ಕಾರ ಮತ್ತು ಸೈನ್ಯದ ನಿರ್ಧಾರಕ್ಕೆ ಬಿಡಬೇಕು. ಮುಂದೆ ದೇಶದಲ್ಲಿ ಇಂತಹ ಘಟನೆ ನಡೆಯದಂತೆ, ದೇಶದ ಸಾರ್ವಭೌಮತ್ವಕ್ಕೆ ಧಕ್ಕೆಯಾಗದಂತೆ ಕಠಿಣ ಕ್ರಮ ಕೇಂದ್ರ ಸರ್ಕಾರ ಕೈಗೊಳ್ಳಬೇಕು” ಎಂದು ಕಿವಿಮಾತು ಹೇಳಿದರು.