
ಬೆಳಗಾವಿ, ಏಪ್ರಿಲ್ 30: 2023ರ ಕರ್ನಾಟಕ ವಿಧಾನಸಭೆ ಚುನಾವಣೆಗಾಗಿ ರಾಜ್ಯದಲ್ಲಿ ಅಬ್ಬರದ ಪ್ರಚಾರ ನಡೆಸುತ್ತಿರುವ ರಾಜಕೀಯ ಪಕ್ಷಗಳು, ಅಧಿಕಾರಕ್ಕೇರಲು ಮತ್ತು ಮತಗಳನ್ನು ಸೆಳೆಯಲು ಮತದಾರರಿಗೆ ಇನ್ನಿಲ್ಲದ ಆಶ್ವಾಸನೆಗಳನ್ನು ಘೋಷಿಸುತ್ತಿವೆ.

ಇದೇ ವೇಳೆ ರಾಜ್ಯ ಚುನಾವಣೆ ಹಿನ್ನೆಲೆ ರಾಜ್ಯಕ್ಕೆ ರಾಷ್ಟ್ರೀಯ ನಾಯಕರು ಆಗಮಿಸಿದ್ದು, ತಮ್ಮ ಪಕ್ಷಗಳ ಅಭ್ಯರ್ಥಿಗಳ ಪರ ಭರ್ಜರಿ ಪ್ರಚಾರ ಮಾಡುತ್ತಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿಗಳ ಪರವಾಗಿ ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ ಪ್ರಚಾರ ಮಾಡುತ್ತಿದ್ದಾರೆ.

ಬೆಳಗಾವಿ ಜಿಲ್ಲೆಯ ಖಾನಾಪುರ ಕಾಂಗ್ರೆಸ್ ಅಭ್ಯರ್ಥಿ ಅಂಜಲಿ ನಿಂಬಾಳ್ಕರ್ ಪರವಾಗಿ ಪ್ರಚಾರದಲ್ಲಿ ಮಾತನಾಡಿದ ಪ್ರಿಯಾಂಕಾ ಗಾಂಧಿ ವಾದ್ರಾ, ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಅಂಗನವಾಡಿ ಕಾರ್ಯಕರ್ತೆಯರಿಗೆ 15 ರೂ. ವರೆಗೆ ವೇತನ ಹೆಚ್ಚಿಸಲಾಗುವುದು ಮತ್ತು ಆಶಾ ಕಾರ್ಯಕರ್ತೆಯರಿಗೆ 8 ಸಾವಿರ ರೂ. ವರೆಗೆ ವೇತನ ಹೆಚ್ಚಿಸಲಾಗುವುದು ಎಂದು ಹೊಸ ಘೋಷಣೆ ಮಾಡಿದರು.

“ಅಂಗನವಾಡಿ ಮತ್ತು ಆಶಾ ಕಾರ್ಯಕರ್ತೆಯರಿಗೆ ಯಾವುದೇ ಪಿಂಚಣಿ ಸೌಲಭ್ಯ ಸಿಗಲ್ಲ. ಹೀಗಾಗಿ ಅಂಗನವಾಡಿ ಮಹಿಳೆಯರಿಗೆ 15 ಸಾವಿರ ರೂ. ವರೆಗೆ ಮತ್ತು ಆಶಾ ಕಾರ್ಯಕರ್ತೆಯರಿಗಾಗಿ 8 ಸಾವಿರ ರೂ. ವರೆಗೆ ವೇತನ ಹೆಚ್ಚಿಸಲಾಗುವುದು. ಇದೇ ವೇಳೆ ಬಿಸಿಯೂಟ ಕಾರ್ಯಕರ್ತರ ವೇತನವನ್ನು 5 ಸಾವಿರ ರೂ.ಗೆ ಏರಿಕೆ ಮಾಡಲಾಗುವುದು,” ಎಂದು ಘೋಷಿಸಿದರು. ಈ ಮೂಲಕ ಖಾನಾಪುರದ ಸಮಾವೇಶದಲ್ಲಿ ಪ್ರಿಯಾಂಕಾ ಗಾಂಧಿ ವಾದ್ರಾ ಹೊಸ ಘೋಷಣೆ ಮಾಡಿದ್ದು, ಕರ್ನಾಟಕ ಕಾಂಗ್ರೆಸ್ ಗ್ಯಾರಂಟಿ ಯೋಜನೆಗಳಿಗೆ ಈ ಗ್ಯಾರಂಟಿಗಳೂ ಸೇರಿದೆ. ಇದರಿಂದ ಅಂಗನವಾಡಿ, ಆಶಾ ಕಾರ್ಯಕರ್ತರ ಮತಗಳನ್ನು ಸೆಳೆಯಲು ಮುಂದಾಗಿದ್ದಾರೆ.
