

ಬೆಂಗಳೂರು: ಬಿಲ್ಲವ-ಈಡಿಗ ಸಮುದಾಯಗಳ ಬಹುದಿನಗಳ ಬೇಡಿಕೆಗೆ ರಾಜ್ಯ ಸರ್ಕಾರ ಕೊನೆಗೂ ಸ್ಪಂದಿಸಿದ್ದು ಬಹುದಿನಗಳ ಪ್ರಮುಖ ಬೇಡಿಕೆ ಶ್ರೀ ನಾರಾಯಣ ಗುರು ಅಭಿವೃದ್ಧಿ ನಿಗಮ ಸ್ಥಾಪನೆ ಮಾಡಿ ಸಿಎಂ ಬೊಮ್ಮಾಯಿ ಘೋಷಣೆ ಮಾಡಿದ್ದಾರೆ. ರಾಜ್ಯದಲ್ಲಿರುವ ಈಡಿಗ- ಬಿಲ್ಲವ ಸಮುದಾಯದ ಅಭಿವೃದ್ಧಿಗಾಗಿ ಶ್ರೀ ನಾರಾಯಣ ಗುರು ಹೆಸರಿನಲ್ಲಿ ಅಭಿವೃದ್ಧಿ ನಿಗಮವನ್ನು ಸ್ಥಾಪಿಸಿ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಆದೇಶ ಹೊರಡಿಸಿದೆ.
ಈ ಕುರಿತು ಟ್ವಿಟರ್ ನಲ್ಲಿ ಮಾಹಿತಿ ನೀಡಿರುವ ಸಿಎಂ ಬೊಮ್ಮಾಯಿ ಅವರು, ‘ರಾಜ್ಯದ ಬಿಲ್ಲವ/ಈಡಿಗ ಸಮುದಾಯಗಳ ಬಹುದಿನದ ಬೇಡಿಕೆಯಾಗಿದ್ದ ಶ್ರೀ ನಾರಾಯಣ ಗುರು ಅಭಿವೃದ್ಧಿ ನಿಗಮವನ್ನು ಸ್ಥಾಪಿಸಿ, ಆದೇಶ ಹೊರಡಿಸಲಾಗಿದೆ. ಈ ನಿಗಮವು ಈಡಿಗ/ಬಿಲ್ಲವ ಸೇರಿದಂತೆ ಇತರ ಪ್ರಮುಖ 26 ಉಪಜಾತಿಗಳ ಸರ್ವತೋಮುಖ ಅಭಿವೃದ್ಧಿಗಾಗಿ ಕೆಲಸ ನಿರ್ವಹಿಸಲಿದೆ’ ಎಂದು ಹೇಳಿದ್ದಾರೆ. ಸಂವಿಧಾನದ ಅನುಚ್ಛೇದ-15(4)ರಂತೆ ವಿದ್ಯಾಸಂಸ್ಥೆಗಳಲ್ಲಿ ಪ್ರವೇಶ ಮತ್ತು 16(4)ರ ಮೇರೆಗೆ ನೇಮಕಾತಿಗಳಲ್ಲಿ ಮೀಸಲಾತಿಯನ್ನು ಕಲ್ಪಿಸಲು ಹಿಂದುಳಿದ ವರ್ಗಗಳನ್ನು ಗುರುತಿಸಿ ಜಾತಿ ಪಟ್ಟಿಯನ್ನು ಹೊರಡಿಸಲಾಗಿರುತ್ತದೆ. ಅದರನ್ವಯ ಸದರಿ ಜಾತಿ ಪಟ್ಟಿಯಲ್ಲಿ ಪವರ್ಗ 2’ಎ’ಯ ಕ್ರಮಸಂಖ್ಯೆ 4(a)ಯಿಂದ (z)ವರೆಗೆ ನಮೂದಾಗಿರುವ ಈಡಿಗ ಸೇರಿದಂತೆ ಒಟ್ಟು 26 ಜಾತಿಗಳಿಗೆ ಶೈಕ್ಷಣಿಕ ಹಾಗೂ ಉದ್ಯೋಗ ನೇಮಕಾತಿಗಳಲ್ಲಿ ಮೀಸಲಾತಿ ಕಲ್ಪಿಸಲಾಗುವುದು ಎಂದು ಇಲಾಖೆಯ ಅಧೀನನ ಕಾರ್ಯದರ್ಶಿ ಷಾಹಿನ್ ಪರ್ವಿನ್ ಆದೇಶದಲ್ಲಿ ತಿಳಿಸಿದ್ದಾರೆ.