ನಿಶ್ಚಿತಾರ್ಥದ ಸಡಗರ- ಸಂಭ್ರಮದ ನಡುವೆ ದೇವಸ್ಥಾನಕ್ಕೆಂದು ತೆರಳುತ್ತಿದ್ದ ವೇಳೆ ಯುವಕನೊಬ್ಬ ಭೀಕರ ಅಪಘಾತದಲ್ಲಿ ಸಾವನ್ನಪ್ಪಿರುವ ಘಟನೆ ಚಿತ್ರದುರ್ಗದ ತಿರುಮಲ ಡಾಬಾ ಬಳಿ ನಡೆದಿದೆ.
ಕಾರು ಹಾಗೂ ಲಾರಿ ಮಧ್ಯೆ ಸಂಭವಿಸಿದ ಭೀಕರ ಅಪಘಾತದಲ್ಲಿ ಕೃಷಿ ಇಲಾಖೆಯಲ್ಲಿ ನೌಕರನಾಗಿದ್ದ ಯುವಕ ಮೃತಪಟ್ಟಿದ್ದಾರೆ.
28 ವರ್ಷದ ವಿಶಾಲ್ ಮೃತ ದುರ್ದೈವಿ. ಹೊಳಲ್ಕೆರೆ ಕೃಷಿ ಇಲಾಖೆಯಲ್ಲಿ ಟೆಕ್ನಿಕಲ್ ವಿಭಾಗದಲ್ಲಿ ಕಾರ್ಯನಿರ್ವಹಿಸುತ್ತಿದ್ದರು.
ನಾಳೆ ಭಾನುವಾರ ವಿಶಾಲ್ ನಿಶ್ಚಿತಾರ್ಥವಿತ್ತು. ಇಂದು ಶನಿವಾರವಾದ್ದರಿಂದ ಹೊಳಲ್ಕೆರೆ ಬಳಿಯ ಆಂಜನೇಯ ದೇವಸ್ಥಾನಕ್ಕೆಂದು ಕಾರಿನಲ್ಲಿ ತೆರಳುತ್ತಿದ್ದರು. ಈ ವೇಳೆ ಕಾರು ಹಾಗೂ ಲಾರಿ ಮುಖಾಮುಖಿ ಡಿಕ್ಕಿಯಾಗಿದ್ದು, ಸ್ಥಳದಲ್ಲೇ ವಿಶಾಲ್ ಮೃತಪಟ್ಟಿದ್ದಾರೆ. ಅಪಘಾತದ ರಭಸಕ್ಕೆ ಲಾರಿ ರಸ್ತೆಬದಿ ಉರುಳಿ ಬಿದ್ದಿದೆ.
ಚಿತ್ರದುರ್ಗ ಗ್ರಾಮಾಂತರ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.