

ಉಜಿರೆ, ಎ. 19: ಸುಮಾರು 400 ವರ್ಷಗಳ ಹಿಂದೆ ಸ್ಥಾಪನೆಯಾದ ವೇಣೂರು ಭಗವಾನ್ ಬಾಹುಬಲಿ ಮೂರ್ತಿಯ ಮಹಾಮಸ್ತಕಾಭಿಷೇಕ ಕಾರ್ಯಕ್ರಮವು 2024ರ ಫೆಬ್ರವರಿಯಲ್ಲಿ ನಡೆಯಲಿದ್ದು, 10 ದಿನಗಳ ಕಾಲ ನಡೆಯುವ ರಾಜ್ಯಮಟ್ಟದ ಈ ಕಾರ್ಯಕ್ರಮದ ದಿನಾಂಕವನ್ನು ಚುನಾವಣೆ ಬಳಿಕ ನಿಗದಿಪಡಿಸಲಾಗುವುದು ಎಂದು ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆಯವರು ಹೇಳಿದರು.

ಅವರು ಇಂದು ಸಂಜೆ ಉಜಿರೆಯ ಸಿದ್ದವನದಲ್ಲಿ ಕರೆಯಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು.
ಸರಕಾರ ರಚನೆಯಾದ ಬಳಿಕ ಪ್ರಮುಖ ನಿರ್ಧಾರಗಳನ್ನು ಕೈಗೊಳ್ಳಲಾಗುವುದು, ಸರಕಾರದ ಅನುದಾನವನ್ನು ಪಡೆಯಲಾಗುವುದು. ಪೂರ್ವತಯಾರಿಯಾಗಿ ಕೆಲವು ಅಭಿವೃದ್ಧಿ ಕಾರ್ಯಗಳು ವೇಣೂರಿನಲ್ಲಿ ನಡೆಯಲಿದೆ ಎಂದು ಧಮಾಧಿಕಾರಿಗಳು ತಿಳಿಸಿದರು.
ಮೂಡಬಿದಿರೆ ಜೈನಮಠದ ಶ್ರೀ ಭಟ್ಟಾರಕ ಚಾರುಕೀರ್ತಿ ಪಂಡಿತಾಚಾರ್ಯವರ್ಯ ಮಹಾಸ್ವಾಮೀಜಿಯವರು ಮಾತನಾಡಿ, ಸವಿಸ್ತಾರವಾದ ಉದ್ದೇಶ, ಐಕ್ಯತೆಯೊಂದಿಗೆ ಸಮಾಜಮುಖಿಯಾಗಿ ಮಹಾಮಜ್ಜನ ನಡೆಸಲು ಸಕಲ ವ್ಯವಸ್ಥೆಗಳನ್ನು ಕೈಗೊಳ್ಳಲಾಗುವುದು.
ಅಹಿಂಸೆಯಿಂದ ಶಾಂತಿ, ತ್ಯಾಗದಿಂದ ಸುಖ, ಮಿತ್ರತ್ವದಿಂದ ನೆಮ್ಮದಿ ಎಂಬ ನೆಲೆಯಲ್ಲಿ ಧರ್ಮದ ವಿಸ್ತಾರ ಸಾರುವ ಈ ಕಾರ್ಯಕ್ರಮವು ಸಮಾಜಮುಖಿಯಾಗಿ ನೆರವೇರಲಿದೆ ಎಂದು ಹೇಳಿದರು.
ಅಳದಂಗಡಿ ಅರಮನೆಯ ತಿಮ್ಮಣ್ಣರಸರಾದ ಡಾ. ಪದ್ಮಪ್ರಸಾದ ಅಜಿಲರು ಮಾತನಾಡಿ, ಡಾ.ಡಿ. ವೀರೇಂದ್ರ ಹೆಗ್ಗಡೆಯವರ ಅಧ್ಯಕ್ಷತೆಯಲ್ಲಿ ಕಾರ್ಯಕ್ರಮ ನಡೆಯಲಿದ್ದು, ಇದು ಧರ್ಮದ ತತ್ವ, ಅಹಿಂಸೆ, ಸಹಬಾಳ್ವೆಯ ಇತಿಹಾಸವನ್ನು ಪ್ರಸ್ತುತಪಡಿಸಲು ವೇದಿಕೆಯಾಗಲಿದೆ. ರಾಜ್ಯಮಟ್ಟದ ಸಮಿತಿ ರಚಿಸಿ ಕಾರ್ಯಕ್ರಮಗಳ ರೂಪುರೇಷೆ ಸಿದ್ದಪಡಿಸಲಾಗುವುದು ಎಂದರು.
ಗೋಷ್ಠಿಯಲ್ಲಿ ಧರ್ಮಸ್ಥಳದ ಡಿ. ಸುರೇಂದ್ರ ಕುಮಾರ್, ಶ್ರೀ ದಿಗಂಬರ ಜೈನ ತೀರ್ಥಕ್ಷೇತ್ರ ಸಮಿತಿಯ ಕಾರ್ಯದರ್ಶಿ ವಿ. ಪ್ರವೀಣ್‌ಕುಮಾರ್ ಇಂದ್ರ, ಕೋಶಾಧಿಕಾರಿ ಪಿ. ಜಯರಾಜ್ ಕಂಬ್ಳಿ, ಜತೆ ಕಾರ್ಯದರ್ಶಿ ಮಹಾವೀರ ಜೈನ್ ಮೂಡುಕೋಡಿ ಹಾಗೂ ಸಮಿತಿ ಸದಸ್ಯರು ಉಪಸ್ಥಿತರಿದ್ದರು.
ಕರ್ನಾಟಕದ ಏಕಶಿಲಾ ವಿಗ್ರಹಗಳ ಪೈಕಿ ವೇಣೂರು ಬಾಹುಬಲಿ ಮೂರ್ತಿ 35 ಅಡಿ ಇದ್ದು, ಎತ್ತರದಲ್ಲಿ ನಾಲ್ಕನೇ ಸ್ಥಾನ ಹೊಂದಿದೆ. ಪ್ರತಿ 12 ವರ್ಷಗಳಿಗೊಮ್ಮೆ ಮಹಾಮಸ್ತಕಾಭಿಷೇಕ ನಡೆಸುವ ಪರಂಪರೆ ಇದ್ದು, ಈ ಹಿಂದೆ 2000 ಮತ್ತು 2012ರಲ್ಲಿ ಮಹಾಮಸ್ತಕಾಭಿಷೇಕ ನಡೆದಿತ್ತು.