

ನಾಪತ್ತೆಯಾಗಿದ್ದ ಜೈನಮುನಿಯನ್ನು ಬರ್ಬರವಾಗಿ ಹತ್ಯೆ ಮಾಡಲಾಗಿದ್ದು, ಜುಲೈ 6ರಂದು ಕಾಣೆಯಾಗಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಣೆಯಾಗಿರುವ ಬಗ್ಗೆ ಪ್ರಕರಣ ದಾಖಲಿಸಲಾಗಿತ್ತು. ತನಿಖೆ ಕೈಗೊಂಡ ಪೊಲೀಸರು ಅನುಮಾನದ ಮೇಲೆ ಇಬ್ಬರು ವ್ಯಕ್ತಿಗಳನ್ನು ವಶಕ್ಕೆ ಪಡೆದಿದ್ದಾರೆ. ಬೆಳಗಾವಿ ಜಿಲ್ಲೆಯ ಹೀರೆಕುಡಿ ಗ್ರಾಮದ ನಂದಿಪರ್ವತ ಆಶ್ರಮದ ಜೈನ ಮುನಿ ಆಚಾರ್ಯ ಶ್ರೀ 108 ಕಾಮಕುಮಾರ ನಂದಿ ಮಹಾರಾಜರು ಬರ್ಬರವಾಗಿ ಹತ್ಯೆಯಾಗಿದ್ದಾರೆ. ಕಳೆದ 15 ವರ್ಷಗಳಿಂದ ನಂದಿ ಪರ್ವತ ಆಶ್ರಮದಲ್ಲಿ ವಾಸವಿದ್ದರು. ಈ ಕುರಿತು ಜುಲೈ 6ರಂದು ಭಕ್ತರು ಆಶ್ರಮದ ಸುತ್ತಮುತ್ತ ಶೋಧ ನಡೆಸಿದ್ದರು. ಪತ್ತೆಯಾಗದ ಹಿನ್ನೆಲೆ ಶುಕ್ರವಾರ ಚಿಕ್ಕೋಡಿ ಪೊಲೀಸ್ ಠಾಣೆಗೆ ಜೈನಮುನಿ ನಾಪತ್ತೆಯಾದ ಬಗ್ಗೆ ದೂರು ನೀಡಲಾಗಿತ್ತು. ಆಚಾರ್ಯ ಕಾಮಕುಮಾರನಂದಿ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಭೀಮಪ್ಪ ಉಗಾರೆ ದೂರು ನೀಡಿದ್ದು, ಪ್ರಕರಣ ದಾಖಲಿಸಿಕೊಂಡು ಪೊಲೀಸರು ತನಿಖೆ ಕೈಗೊಂಡಿದ್ದರು. ತನಿಖೆ ಸಂದರ್ಭ ಅನುಮಾನದ ಮೇಲೆ ಇಬ್ಬರನ್ನು ವಶಕ್ಕೆ ಪಡೆದಿದ್ದು, ವಿಚಾರಣೆ ವೇಳೆ ಜೈನಮುನಿ ಹತ್ಯೆಯ ರಹಸ್ಯ ಬಯಲಾಗಿದೆ. ಆರೋಪಿಗಳು ಹತ್ಯೆ ಮಾಡಿರುವ ಬಗ್ಗೆ ಪೊಲೀಸರ ಬಳಿ ಬಾಯ್ಬಿಟ್ಟಿದ್ದು, ಕೊಲೆ ಮಾಡಿದ ಬಳಿಕ ಶವವನ್ನು ಎಲ್ಲಿ ಬಿಸಾಕಿದ್ದಾರೆ ಎನ್ನುವ ಬಗ್ಗೆ ಸರಿಯಾದ ಮಾಹಿತಿ ನೀಡದೆ ಪೊಲೀಸರನ್ನು ಸತಾಯಿಸಿದ್ದಾರೆ. ಕೊಲೆ ಮಾಡಿ ಮೃತದೇಹವನ್ನು ಕತ್ತರಿಸಿ ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ಖಟಕಬಾವಿ ಗ್ರಾಮದ ಗದ್ದೆಯ ತೆರೆದ ಕೊಳವೆ ಬಾವಿಯಲ್ಲಿ ಎಸೆದಿದ್ದೇವೆ ಎಂದ ಆರೋಪಿಗಳು ಮತ್ತೊಂದು ಬಾರಿ ಮೃತದೇಹವನ್ನು ಬಟ್ಟೆಯಲ್ಲಿ ಸುತ್ತಿ ನದಿಗೆ ಎಸೆದಿದ್ದೇವೆ ಎಂದಿದ್ದಾರೆ. ಸ್ಪಷ್ಟ ಮಾಹಿತಿ ದೊರೆಯದ ಹಿನ್ನೆಲೆ ನಂದಿ ಮಹಾರಾಜರ ಮೃತದೇಹಕ್ಕಾಗಿ ಪೊಲೀಸರು ರಾತ್ರಿಯಿಡೀ ಶೋಧ ನಡೆಸಿದ್ದಾರೆ. ಖಟಕಬಾವಿ ಗ್ರಾಮ ಸೇರಿದಂತೆ ಹಲವೆಡೆ ಶೋಧ ನಡೆಸಿದ ಪೊಲೀಸರು ಮೃತದೇಹ ಸಿಗದ ಕಾರಣ ಶನಿವಾರ ಬೆಳಗ್ಗೆ 6:30ರಿಂದ ಶೋಧ ಕಾರ್ಯ ನಡೆಸಲು ಮುಂದಾಗಿದ್ದಾರೆ. ಹಣಕಾಸಿನ ವಿಚಾರವಾಗಿ ಕೊಲೆ ನಡೆದಿದೆ ಎಂದು ಪೊಲೀಸರ ಪ್ರಾಥಮಿಕ ಮಾಹಿತಿಯಿಂದ ತಿಳಿದುಬಂದಿದೆ. ಇನ್ನೂ ಆಶ್ರಮದಲ್ಲಿ ನೀರವ ಮೌನ ಆವರಿಸಿದೆ.