





ಬೆಂಗಳೂರು, ಜೂ. 5; ಕರ್ನಾಟಕ ಸರ್ಕಾರ 2023-24ನೇ ಶೈಕ್ಷಣಿಕ ಸಾಲಿನಲ್ಲಿ ರಾಜ್ಯದ ಸರ್ಕಾರಿ ಪದವಿ ಪೂರ್ವ ಕಾಲೇಜುಗಳಲ್ಲಿ ಖಾಲಿಯಿರುವ ಉಪನ್ಯಾಸಕರುಗಳ ಹುದ್ದೆಗಳಿಗೆ ಅತಿಥಿ ಉಪನ್ಯಾಸಕರುಗಳನ್ನು ನೇಮಕ ಮಾಡಿಕೊಳ್ಳುವ ಬಗ್ಗೆ ಆದೇಶ ಹೊರಡಿಸಿದ್ದು, ಅದರಂತೆ ದಕ್ಷಿಣ ಕನ್ನಡ ಜಿಲ್ಲೆಗೆ 240 ಹಾಗೂ ಉಡುಪಿಗೆ 200 ಅತಿಥಿ ಉಪನ್ಯಾಸಕರ ನೇಮಕಾತಿಮಾಡಲಾಗಿದೆ. ಒಟ್ಟು 4055 ಹುದ್ದೆ ಭರ್ತಿ ಮಾಡಲಾಗುತ್ತಿದೆ.
ಸರ್ಕಾರದ ಆದೇಶ ದಿನಾಂಕ ೦೨/೦೬/೨೦೨೩, ಪದವಿ ಪೂರ್ವ ಶಿಕ್ಷಣ ಇಲಾಖೆ ಕಚೇರಿ ಪತ್ರ ದಿನಾಂಕ ೧೯/೦೧/೨೦೨೩ ಮತ್ತು ಜಿಲ್ಲಾ ಉಪ ನಿರ್ದೇಶಕರಿಂದ ಬಂದ ವರದಿಗಳನ್ನು ಉಲ್ಲೇಖಿಸಿ ರಾಜ್ಯದ ಸರ್ಕಾರಿ ಪದವಿ ಪೂರ್ವ ಕಾಲೇಜುಗಳಲ್ಲಿ ಖಾಲಿಯಿರುವ ಉಪನ್ಯಾಸಕರ ಹುದ್ದೆಗಳು, ಬಡ್ತಿ, ವಯೋನಿವೃತ್ತಿ, ನಿಧನ ಹಾಗೂ ಇತರೆ ಕಾರಣಗಳಿಂದ ತೆರವಾಗಬಹುದಾದ ಉಪನ್ಯಾಸಕರ ಹುದ್ದೆಗಳು ಹಾಗೂ ಹೊಸ ಸಂಯೋಜನೆಗಳಿಗೆ ಹುದ್ದೆ ಮಂಜೂರಾಗದ ವಿಷಯಗಳಿಗೆ ನೇಮಕ ಮಾಡಿಕೊಳ್ಳಬೇಕಾದ ಅತಿಥಿ ಉಪನ್ಯಾಸಕರ ಸಂಖ್ಯೆ ನಿರ್ಧರಿಸಲಾಗಿದೆ.
ಸರ್ಕಾರಿ ಪದವಿ ಪೂರ್ವ ಕಾಲೇಜುಗಳಲ್ಲಿ ಖಾಲಿಯಿರುವ ವಿವಿಧ ವಿಷಯಗಳ ಉಪನ್ಯಾಸಕರ ಹುದ್ದೆಗಳನ್ನು ಕಡಿಮೆ ಕಾರ್ಯಭಾರವಿರುವ ವಿಷಯಗಳ ಉಪನ್ಯಾಸಕರುಗಳಿಂದ ಸರಿದೂಗಿಸಿದ ನಂತರ ಹುದ್ದೆಗಳಿಗೆ ಅತಿಥಿ ಉಪನ್ಯಾಸಕರನ್ನು ನೇಮಕ ಮಾಡಿಕೊಳ್ಳಬೇಕಾದ ಸಂಖ್ಯೆ, ಸಂಯೋಜನೆಯನ್ನು ಮಂಜೂರು ಮಾಡಿ ಹುದ್ದೆ ಮಂಜೂರು ಮಾಡದ ವಿಷಯಗಳಿಗೆ ಅತಿಥಿ ಉಪನ್ಯಾಸಕರನ್ನು ನೇಮಕ ಮಾಡಿಕೊಳ್ಳಬೇಕಾದ ಸಂಖ್ಯೆಯನ್ನು ಹಾಗೂ ನೇಮಕ ಮಾಡಿಕೊಳ್ಳಬೇಕಾದ ಒಟ್ಟು ಅತಿಥಿ ಉಪನ್ಯಾಸಕರ ಸಂಖ್ಯೆ ಮಾಹಿತಿಯನ್ನು ಒದಗಿಸುವಂತೆ ಈ ಹಿಂದೆ ಜಿಲ್ಲಾ ಉಪನಿರ್ದೇಶಕರುಗಳನ್ನು ಕೋರಲಾಗಿತ್ತು.